BW News Bureau : ನಮ್ಮ ಮೆಟ್ರೋ ಒಂದನೇ ಹಂತದ ಪೂರ್ವ-ಪಶ್ಚಿಮ ಕಾರಿಡಾರ್ ನ ಮೊದಲ ಸುರಂಗ ಮಾರ್ಗ ಉದ್ಘಾಟನೆಗೆ ಕ್ಷಣಗಣನೆ ಆರಂಭವಾಗಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಸುರಂಗ ಮಾರ್ಗಕ್ಕೆ ಹಸಿರು ನಿಶಾನೆ ತೋರಲಿದ್ದಾರೆ. ಒಟ್ಟು 18.1 ಕಿ.ಮೀ. ಮಾರ್ಗ ಲೋಕಾರ್ಪಣೆ ಬಳಿಕ ಶನಿವಾರದಿಂದ ಸಂಪೂರ್ಣವಾಗಿ ಸಾರ್ವಜನಿಕ ಸಂಚಾರಕ್ಕೆ ಲಭ್ಯವಾಗಲಿದೆ.
ಮೂರನೇ ಹಳಿ ಮೂಲಕ ರೈಲಿಗೆ ವಿದ್ಯುತ್ ಸರಬರಾಜು ಮಾಡಿ ರೈಲು ಸಂಚಾರಕ್ಕೆ ಅನುವು ಮಾಡಿಕೊಡುವ ‘ಥರ್ಡ್ ರೈಲ್’ ವ್ಯವಸ್ಥೆ ಹೊಂದಿರುವ ದೇಶದ ಮೊದಲ ಸುರಂಗ ಮಾರ್ಗ ಇದಾಗಿದೆ.
ಮೊದಲ ಹಂತದ ಒಟ್ಟಾರೆ 42.30 ಕಿ.ಮೀ. ಮಾರ್ಗದ ಪೈಕಿ 32.49 ಕಿ.ಮೀ. ಉದ್ದದ ಮಾರ್ಗದಲ್ಲಿ ರೈಲು ಸಂಚಾರ ಆರಂಭವಾದಂತಾಗಲಿದೆ. ಇನ್ನುಳಿದ 9.81 ಕಿ.ಮೀ. ಮಾರ್ಗ ಈ ವರ್ಷಾಂತ್ಯದ ವೇಳೆಗೆ ಸಾರ್ವಜನಿಕ ಸಂಚಾರಕ್ಕೆ ಮುಕ್ತಗೊಳ್ಳುವ ನಿರೀಕ್ಷೆ ಇದೆ.
ನಾಯಂಡಹಳ್ಳಿಯಿಂದ ವಿಧಾನಸೌಧಕ್ಕೆ ಪ್ರಯಾಣಿಸುವ ಪ್ರಯಾಣಿಕರು ಟ್ರಾಫಿಕ್ ಜಾಮ್ ಸಮಸ್ಯೆ ಇಲ್ಲದೇ,ಕೇವಲ 33 ನಿಮಿಷದಲ್ಲಿ ನಾಯಂಡಹಳ್ಳಿಯಿಂದ ವಿಧಾನಸೌಧಕ್ಕೆ, ವಿಧಾನಸೌಧದಿಂದ ನಾಯಂಡಹಳ್ಳಿಗೆಪ್ರಯಾಣಿಸಬಹುದಾಗಿದೆ.
ಪೂರ್ವ-ಪಶ್ಚಿಮ ಕಾರಿಡಾರ್‌ನಲ್ಲಿ ಈಗಾಗಲೇ ಎಂಜಿ ರಸ್ತೆಯಿಂದ ಬೈಯ್ಯಪ್ಪನಹಳ್ಳಿ, ನಾಯಂಡಹಳ್ಳಿಯಿಂದ ಮಾಗಡಿ ರಸ್ತೆವರೆಗಿನ 13.28 ಕಿ.ಮೀ. ಮಾರ್ಗದಲ್ಲಿ ನಮ್ಮ ಮೆಟ್ರೋ ರೈಲು ಸಂಚರಿಸುತ್ತಿದೆ. ಇದೀಗ 4.82 ಕಿ.ಮೀ. ಸುರಂಗ ಮಾರ್ಗದಲ್ಲೂ ರೈಲು ಸಂಚಾರ ಆರಂಭವಾಗುತ್ತಿದ್ದು, ಈ ಮೂಲಕ ಪೂರ್ವ-ಪಶ್ಚಿಮ ಕಾರಿಡಾರ್ ನ ಒಟ್ಟಾರೆ 18.10 ಕಿ.ಮೀ. ಮಾರ್ಗದಲ್ಲಿ ರೈಲು ಸಂಚಾರ ಆರಂಭವಾಗಲಿದೆ.