BW News Bureau : ಬೆಂಗಳೂರಿನಲ್ಲಿ ಸಂಚಾರ ನಿಯಮ ಉಲ್ಲಂಘನೆಯ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನಲೆಯಲ್ಲಿ, ಸಂಚಾರ ನಿಯಮ ಉಲ್ಲಂಘನೆಯ ಪ್ರಥಮ ಪ್ರಕರಣದಲ್ಲೇ ಡ್ರೈವಿಂಗ್ ಲೈಸನ್ಸ್ ಜಪ್ತಿ ಮಾಡಲಾಗುತ್ತದೆ.
ಬೆಂಗಳೂರು ನಗರ ಸಂಚಾರ ವಿಭಾಗದ ಪೊಲೀಸರು ಇಂತಹದ್ದೊಂದು ಕಠಿಣ ಕ್ರಮಕ್ಕೆ ಮುಂದಾಗಿದ್ದಾರೆ. ಕುಡಿದು ವಾಹನ ಚಾಲನೆ, ಪಾದಚಾರಿ ಮಾರ್ಗದ ಮೇಲೆ ವಾಹನ ಚಾಲನೆ, ಮೊಬೈಲ್ನಲ್ಲಿ ಮಾತನಾಡುತ್ತ ವಾಹನ ಚಾಲನೆ, ಹೆಲ್ಮೆಟ್ ರಹಿತ ಸವಾರಿ, ತ್ರಿಬಲ್ ರೈಡಿಂಗ್, ಸಿಗ್ನಲ್ ಜಂಪ್, ಡ್ರ್ಯಾಗ್ ರೇಸ್, ನೋ ಪಾರ್ಕಿಂಗ್ ಸೇರಿದಂತೆ ಸಂಚಾರ ನಿಯಮ ಉಲ್ಲಂಘನೆಯ ಮೊದಲ ಪ್ರಕರಣಗಳಲ್ಲೇ ಡಿಎಲ್ ಜಪ್ತಿ ಮಾಡಿಕೊಂಡು ಅಮಾನತ್ತಿಗೆ ಸಾರಿಗೆ ಇಲಾಖೆಗೆ ಶಿಫಾರಸು ಮಾಡಲಾಗುತ್ತದೆ ಎಂದು ನಗರ ಸಂಚಾರ ವಿಭಾಗದ ಹೆಚ್ಚುವರಿ ಪೊಲೀಸ್ ಆಯುಕ್ತ ಡಾ ಎಂ ಎ ಸಲೀಂ ಹೇಳಿದ್ದಾರೆ.
ಈ ಹಿಂದೆ ಕುಡಿದು ವಾಹನ ಚಾಲನೆ ಮಾಡಿದರೆ ಹಾಗೂ ಹಲವು ಬಾರಿ ಸಂಚಾರ ನಿಯಮಗಳ ಉಲ್ಲಂಘನೆ ಮಾಡಿದರೆ ಮಾತ್ರ ಡ್ರೈವಿಂಗ್ ಲೈಸನ್ಸ್ ಅಮಾನತಿಗೆ ಶಿಫಾರಸು ಮಾಡಲಾಗುತ್ತಿತ್ತು. ಇನ್ನು ಮುಂದೆ ಪ್ರಥಮ ಪ್ರಕರಣದಲ್ಲೇ ಡ್ರೈವಿಂಗ್ ಲೈಸನ್ಸ್ ಅಮಾನತಿಗೆ ಶಿಫಾರಸು ಮಾಡಲಾಗುತ್ತದೆ.