ಲಾಹೋರ್ : ಲಾಹೋರ್ ನ ಇಲ್ಲಿನ ಗದ್ದಾಫಿ ಕ್ರಿಕೆಟ್ ಸ್ಟೇಡಿಯಂ ಸಮೀಪ ರಾತ್ರಿ 9 ಗಂಟೆಗೆ ನಡೆದ ಆತ್ಮಾಹುತಿ ದಾಳಿಯಲ್ಲಿ ಓರ್ವ ಪೊಲೀಸ್ ಸಬ್ ಇನ್ಸ್ ಪೆಕ್ಟರ್ ಸೇರಿದಂತೆ ಇಬ್ಬರು ಸಾವನ್ನಪ್ಪಿದ್ದಾರೆ. ಮೃತ ಎಸ್ ಐ ಅನ್ನು ಅಬ್ದುಲ್ ಮಜೀದ್ ಎಂದು ಗುರುತಿಸಲಾಗಿದೆ.
ಈ ಘಟನೆ ನಡೆದಾಗ ಪಾಕಿಸ್ಥಾನ ಮತ್ತು ಜಿಂಬಾಬ್ವೆ ನಡುವೆ ಹಗಲು ರಾತ್ರಿಯ ಏಕದಿನ ಅಂತಾರಾಷ್ಟ್ರೀಯ ಪಂದ್ಯ ನಡೆಯುತ್ತಿತ್ತು. ಸುಮಾರು 20,000 ಮಂದಿ ಅದನ್ನು ವೀಕ್ಷಿಸುತ್ತಿದ್ದರು.
ಆಟೋ ರಿಕ್ಷಾದಲ್ಲಿ ಬಂದ ಆತ್ಮಾಹುತಿ ಬಾಂಬರ್ ನನ್ನು ಕಲ್ಮಾ ಚೌಕದಲ್ಲಿ ಪೊಲೀಸ್ ಸಬ್ ಇನ್ಸ್ಪೆಕ್ಟರ್ ತಡೆದಾಗ ಆತ ತನ್ನನ್ನು ತಾನು ಸ್ಫೋಟಿಸಿಕೊಂಡ ಎಂದು ಪಾಕಿಸ್ಥಾನದ ವಾರ್ತಾ ಸಚಿವ ಪರ್ವೇಜ್ ರಶೀದ್ ತಿಳಿಸಿದ್ದಾರೆ.ಇದೊಂದು ಭಯೋತ್ಪಾದಕ ದಾಳಿಯಾಗಿದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಪಾಕಿಸ್ತಾನ-ಜಿಂಬಾಬ್ವೆ ಏಕದಿನ ಪಂದ್ಯ ನಡೆಯುತ್ತಿದ್ದ ಗದ್ದಾಫಿ ಕ್ರಿಕೆಟ್ ಸ್ಟೇಡಿಯಂನಿಂದ ಕೇವಲ ಒಂದು ಕಿ.ಮೀ. ದೂರದಲ್ಲಿರುವ ಕಲ್ಮಾ ಚೌಕದಲ್ಲಿ ಈ ಘಟನೆ ನಡೆದಿದೆ. ಆರಂಭದ ವರದಿಗಳ ಪ್ರಕಾರ ಗ್ಯಾಸ್ ಅಳವಡಿಸಿದ್ದ ಆಟೋ ರಿಕ್ಷಾ ಸ್ಫೋಟಗೊಂಡಿತೆನ್ನಲಾಗಿದೆ. ಪರಿಣಾಮವಾಗಿ ಎಸ್ಐ ಮತ್ತು ಇನ್ನೊಬ್ಬ ಮೃತಪಟ್ಟರಲ್ಲದೆ ನಾಲ್ವರು ಪೊಲೀಸ್ ಸಿಬಂದಿ ಮತ್ತು ಓರ್ವ ನಾಗರಿಕ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಸಮೀಪದ ಆಸ್ಪತ್ರೆಗೆ ಸೇರಿಸಲಾಗಿದೆ.