ಚೆನ್ನೈ : ಅಕ್ರಮ ಆಸ್ತಿ ಪ್ರಕರಣಕ್ಕೆ ಸಂಬಂಧಿಸಿದಂತೆ ಹೈಕೋರ್ಟ್ ಏಕಸದಸ್ಯ ಪೀಠ ತಮಿಳುನಾಡು ಮಾಜಿ ಮುಖ್ಯಮಂತ್ರಿ ಜಯಲಲಿತಾ ನಿರ್ದೋಷಿ ಎಂದು ತೀರ್ಪು ನೀಡಿರುವ ಹಿನ್ನೆಲೆಯಲ್ಲಿ ಜಯಲಲಿತಾ ಅವರಿಗೆ ದೊಡ್ಡ ರಿಲೀಫ್ ಸಿಕ್ಕಂತಾಗಿದೆ. ಈ ಹಿನ್ನಲೆಯಲ್ಲಿ ತಮಿಳುನಾಡು ಹಾಲಿ ಮುಖ್ಯಮಂತ್ರಿ ಪನ್ನೀರ್ ಸೆಲ್ವಂ ರಾಜೀನಾಮೆ ನೀಡುವುದು ಬಹುತೇಕ ಖಚಿತವಾಗಿದೆ.
ಅಕ್ರಮ ಆಸ್ತಿಗಳಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜಯಲಲಿತಾ ಖುಲಾಸೆಯಾದ ಹಿನ್ನಲೆಯಲ್ಲಿ ಪನ್ನೀರ್ ಸೆಲ್ವಂ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಲು ಮುಂದಾಗಿದ್ದಾರೆ. ಆದರೆ ಇನ್ನೂ ಎರಡು ದಿನಗಳ ಕಾಲ ರಾಜೀನಾಮೆ ನೀಡದಂತೆ ಜಯಲಲಿತಾ ಸೂಚಿಸಿದ್ದಾರೆ ಎಂದು ತಿಳಿದುಬಂದಿದೆ.
ಹೈಕೋರ್ಟ್ ಏಕಸದಸ್ಯ ಪೀಠದ ನ್ಯಾ.ಸಿ.ಆರ್ ಕುಮಾರಸ್ವಾಮಿ, ಜಯಲಲಿತಾ ಸೇರಿದಂತೆ ನಾಲ್ವರ ವಿರುದ್ಧದ ಎಲ್ಲಾ ಆರೋಪಗಳನ್ನು ಖುಲಾಸೆಗೊಳಿಸಲಾಗಿದೆ ಎಂದು ತೀರ್ಪು ನೀಡಿದ್ದರು. ಜಯಲಲಿತಾ ವಿಚಾರಣಾ ನ್ಯಾಯಾಲಯ ವಿಧಿಸಿದ್ದ 4ವರ್ಷ ಜೈಲುಶಿಕ್ಷೆ, 100 ಕೋಟಿ ರೂ.ದಂಡ ವಿಧಿಸಿದ್ದನ್ನು ಪ್ರಶ್ನಿಸಿ ಸಲ್ಲಿಸಿದ್ದ ಮೇಲ್ಮನವಿಯನ್ನು ಹೈಕೋರ್ಟ್ ಪುರಸ್ಕರಿಸಿ, ಅಧೀನ ನ್ಯಾಯಾಲಯದ ತೀರ್ಪನ್ನು ರದ್ದುಗೊಳಿಸಿದೆ.
ತೀರ್ಪು ಪ್ರಕಟವಾದ ಬೆನ್ನಲ್ಲೇ ತಮಿಳುನಾಡಿನಲ್ಲಿ ರಾಜಕೀಯ ಚಟುವಟಿಕೆಗಳೂ ಗರಿಗೆದರಿದೆ. ಚೆನ್ನೈನ ಫೋಯಸ್ ಗಾರ್ಡ್ ನ್ ಗೆ ಮುಖ್ಯಮಂತ್ರಿ ಪನ್ನೀರ್ ಸೆಲ್ವಂ ಸೇರಿದಂತೆ ಸಚಿವ ಸಂಪುಟದ ಸದಸ್ಯರೆಲ್ಲರೂ ಸೇರಿ ಮಾತುಕತೆ ನಡೆಸಿದ್ದಾರೆ.
ಅಲ್ಲದೇ ಪನ್ನೀರ್ ಸೆಲ್ವಂ ಶೀಘ್ರವೇ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಲಿದ್ದು, ಜಯಲಲಿತಾ ಮೇ 20ರೊಳಗೆ ಮತ್ತೆ ಮುಖ್ಯಮಂತ್ರಿ ಗದ್ದುಗೆ ಏರಲು ಸಿದ್ಧತೆ ನಡೆಸಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ.