ಬೆಂಗಳೂರು : ಗ್ರಾಮ ಪಂಚಾಯಿತಿಗಳ ಚುನಾವಣೆಗೆ ಅಖಾಡ ಸಿದ್ಧಗೊಂಡಿದ್ದು, ಮೇ 29ರಂದು ನಡೆಯುವ ಮೊದಲ ಹಂತದ ಚುನಾವಣೆಗೆ ಜಿಲ್ಲಾಧಿಕಾರಿಗಳು ಸೋಮವಾರ ಅಧಿಸೂಚನೆ ಹೊರಡಿಸಲಿದ್ದಾರೆ.
ರಾಜ್ಯದ 30 ಜಿಲ್ಲೆಗಳ ಪೈಕಿ ಮೊದಲ ಹಂತದಲ್ಲಿ 15 ಜಿಲ್ಲೆಗಳಲ್ಲಿ ಮೊದಲ ಹಂತದಲ್ಲಿ ಮೇ 29ರಂದು ಚುನಾವಣೆ ನಡೆಯಲಿದೆ. ಅದಕ್ಕಾಗಿ ಜಿಲ್ಲಾಧಿಕಾರಿಗಳು ಮೇ 11ಕ್ಕೆ ಚುನಾವಣಾ ಅಧಿಸೂಚನೆ ಹೊರಡಿಸಲಿದ್ದು, ಚುನಾವಣಾ ಚಟುವಟಿಕೆಗಳಿಗೆ ಅಧಿಕೃತ ಚಾಲನೆ ಸಿಕ್ಕಂತಾಗುತ್ತದೆ. ಅಧಿಸೂಚನೆ ಹೊರಬಿದ್ದ ಕ್ಷಣದಿಂದಲೇ ನಾಮಪತ್ರ ಸಲ್ಲಿಕೆ ಆರಂಭವಾಗಲಿದೆ.
ಒಟ್ಟು 6,073 ಗ್ರಾಮ ಪಂಚಾಯತಿಗಳ ಪೈಕಿ 2015ರ ಆಗಸ್ಟ್ ನಲ್ಲಿ ಅವಧಿ ಪೂರ್ಣಗೊಳ್ಳುವ, ಮೇಲ್ದರ್ಜೆಗೇರಿಸಲ್ಪಟ್ಟ ಮತ್ತು ನ್ಯಾಯಾಲಯದ ತಡೆಯಾಜ್ಞೆ ಇರುವ 229 ಗ್ರಾಮ ಪಂಚಾಯ್ತಿಗಳನ್ನು ಹೊರತುಪಡಿಸಿ ಉಳಿದ 5,844 ಗ್ರಾಮ ಪಂಚಾಯ್ತಿಗಳಿಗೆ 2 ಹಂತಗಳಲ್ಲಿ ಚುನಾವಣೆ ನಡೆಸಲು ಚುನಾವಣಾ ಆಯೋಗ ನಿರ್ಧರಿಸಿದೆ. ಅದರಂತೆ ಮೇ 29ರಂದು ಮೊದಲ ಹಂತ ಹಾಗೂ ಜೂ.2ಕ್ಕೆ ಎರಡನೇ ಹಂತದ ಚುನಾವಣೆ ನಡೆಯಲಿದೆ.
ಮೈಸೂರು, ಚಿಕ್ಕಮಗಳೂರು, ದಕ್ಷಿಣ ಕನ್ನಡ, ಹಾಸನ, ಕೊಡಗು, ಮಂಡ್ಯ, ಚಾಮರಾಜನಗರ, ಉಡುಪಿ, ಬೆಳಗಾವಿ, ವಿಜಯಪುರ, ಹಾವೇರಿ, ಬಾಗಲಕೋಟೆ, ಉತ್ತರಕನ್ನಡ, ಧಾರವಾಡ, ಗದಗ ಮೊದಲ ಹಂತದ ಚುನಾವಣೆ ನಡೆಯುವ ಜಿಲ್ಲೆಗಳಾಗಿವೆ.