ಬೆಂಗಳೂರು : ಬಿಬಿಎಂಪಿಗೆ ಮೂರು ತಿಂಗಳಲ್ಲಿ ಚುನಾವಣೆ ನಡೆಸುವಂತೆ ಸುಪ್ರೀಂ ಕೋರ್ಟ್ ಹೇಳಿದ್ದು, ತೀರ್ಪಿನ ಪ್ರತಿ ಕೈಗೆ ಸಿಕ್ಕ ನಂತರ ಕಾನೂನು ಸಚಿವರು ಹಾಗೂ ಕಾನೂನು ತಜ್ಞರೊಂದಿಗೆ ಚರ್ಚಿಸಿ ಸೂಕ್ತ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.
ಗೃಹ ಕಚೇರಿ ಕೃಷ್ಣಾದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ವಿಷಯ ಸ್ಪಷ್ಟಪಡಿಸಿದರು. ಬಿಬಿಎಂಪಿ ವಿಭಜನೆ ಸಂಬಂಧ ತಿದ್ದುಪಡಿ ಮಸೂದೆಗೆ ವಿಧಾನಸಭೆಯಲ್ಲಿ ಅಂಗೀಕಾರ ಸಿಕ್ಕಿದೆ. ವಿಧಾನಪರಿಷತ್ತಿನಲ್ಲಿ ಆಯ್ಕೆ ಸಮಿತಿಗೆ ಒಪ್ಪಿಸಲಾಗಿದೆ. ಈ ಸಮಿತಿಯ ಶಿಫಾರಸು ಇನ್ನೂ ಸರ್ಕಾರಕ್ಕೆ ತಲುಪಿಲ್ಲ. ಹಾಗಾಗಿ ಸದ್ಯಕ್ಕೆ ಬಿಬಿಎಂಪಿ ವಿಭಜನೆ ಸಾಧ್ಯವಾಗುವುದಿಲ್ಲ. ಬಿಬಿಎಂಪಿ ವಿಭಜನೆ ಮಾಡದೆ ಚುನಾವಣೆ ನಡೆಸಿದರೆ ವಿಭಜನೆಯ ನಂತರ, ಮತ್ತೊಂದು ಚುನಾವಣೆ ಮಾಡಬೇಕಾಗುತ್ತದೆ. ಇದರಿಂದಾಗಿ ಆರ್ಥಿಕವಾಗಿ ಹೊರೆ ಆಗಲಿದೆ ಎಂದು ತಿಳಿಸಿದರು.
ಬಿಬಿಎಂಪಿ ವಿಭಜನೆ ಮಾಡುವುದಾದರೆ 3 ತಿಂಗಳಲ್ಲಿ ಚುನಾವಣೆ ಮಾಡುವುದಕ್ಕಾಗುವುದಿಲ್ಲ. ಹಾಗಾಗಿ ಮತ್ತೊಮ್ಮೆ ಸುಪ್ರೀಂಕೋರ್ಟ್ ಗೆ ಮೇಲ್ಮನವಿ ಸಲ್ಲಿಸಲು ಸರ್ಕಾರ ಚಿಂತನೆ ನಡೆಸಿದೆ. ನಿನ್ನೆ ತೀರ್ಪಿನಲ್ಲಿ ಯಾವ, ಯಾವ ಅಂಶಗಳನ್ನು ಪ್ರಸ್ತಾಪಿಸಲಾಗಿದೆ ಎಂಬುದನ್ನು ಪರಿಶೀಲಿಸಿ ಮುಂದಿನ ತೀರ್ಮಾನ ತೆಗೆದುಕೊಳ್ಳಲು ಸರ್ಕಾರ ನಿರ್ಧರಿಸಿದೆ. ಸುಪ್ರೀಂಕೋರ್ಟ್ ನ ತೀರ್ಪಿನ ಪ್ರತಿ ಸಿಕ್ಕ ನಂತರ ಕಾನೂನು ತಜ್ಞರೊಂದಿಗೆ ಚರ್ಚಿಸಿ ನಿರ್ಧಾರ ತೆಗೆದುಕೊಳ್ಳಲಾಗುತ್ತದೆ ಎಂದು ಹೇಳಿದರು.