ನವದೆಹಲಿ : ದೆಹಲಿಯಲ್ಲಿ ಉಗ್ರರ ದಾಳಿ ನಡೆಯುವ ಬಗ್ಗೆ ಎಚ್ಚರಿಕೆ ಸಂದೇಶ ಬಂದಿರುವ ಹಿನ್ನೆಲೆಯಲ್ಲಿ ಏ.28ರಂದು ದೆಹಲಿ ಪೊಲೀಸ್ ಆಯುಕ್ತ ಬಿ.ಎ ಬಸ್ಸಿ ಅವರು ಎಲ್ಲಾ ಡಿಸಿಪಿಗಳ ಸಭೆ ಕರೆದಿದ್ದಾರೆ.
ಜೈಶಾ ಉಗ್ರ ಸಂಘಟನೆಯಿಂದ ದೆಹಲಿಯಲ್ಲಿ ದಾಳಿ ನಡೆಯುವ ಬಗ್ಗೆ ಕೇಂದ್ರ ಗುಪ್ತಚರ ಇಲಾಖೆ ದೆಹಲಿ ಪೊಲೀಸರಿಗೆ ಎಚ್ಚರಿಕೆ ನೀಡಿತ್ತು. ಈ ಹಿನ್ನೆಲೆಯಲ್ಲಿ ಎಚ್ಚೆತ್ತುಕೊಂಡಿರುವ ದೆಹಲಿ ಪೊಲೀಸ್ ಆಯುಕ್ತರು ಉನ್ನತ ಅಧಿಕಾರಿಗಳ ಸಭೆ ಕರೆದ್ದಾರೆ.
ದೆಹಲಿಯಲ್ಲಿ ಯಾವುದೇ ಅನುಮಾನಾಸ್ಪದ ವ್ಯಕ್ತಿಗಳು ಕಂಡುಬಂದರೂ ತಕ್ಷಣವೇ ವಿಚಾರಣೆ ನಡೆಸಬೇಕು, ಭದ್ರತೆಯನ್ನು ಚುರುಕುಗೊಳಿಸಬೇಕೆಂದು ದೆಹಲಿ ಪೊಲೀಸ್ ಆಯುಕ್ತರು ಈಗಾಗಲೇ ಸೂಚನೆ ನೀಡಿದ್ದಾರೆ. ವಿಮಾನ ನಿಲ್ದಾಣ, ರೈಲ್ವೇ ನಿಲ್ದಾಣಗಳಲ್ಲಿ ನಿಗಾವಹಿಸಬೇಕು ಎಂದು ಪೊಲೀಸ್ ಅಧಿಕಾರಿಗಳಿಗೆ ಆದೇಶ ನೀಡಲಾಗಿದೆ.
ದೆಹಲಿ, ಮುಂಬೈ ಸೇರಿದಂತೆ ಭಾರತದ ಪ್ರಮುಖ ಮೆಟ್ರೋ ನಗರಗಳು ಉಗ್ರರ ಹಿಟ್ ಲಿಸ್ಟ್ ನಲ್ಲಿದ್ದು, ವಿಧ್ವಂಸಕ ಕೃತ್ಯ ನಡೆಸಲು ಸಂಚು ರೂಪಿಸಿದ್ದಾರೆ ಎಂದು ಗುಪ್ತಚರ ಇಲಾಖೆ ಎಚ್ಚರಿಕೆ ನೀಡಿತ್ತು.