ತೆಹ್ರಾನ್ : ಸಿರಿಯಾ, ಇರಾಕ್ ಗಳಲ್ಲಿ ಅಟ್ಟಹಾಸ ಮೆರೆಯುತ್ತಿದ್ದ ಐಸಿಸ್ ಉಗ್ರಗಾಮಿ ಸಂಘಟನೆಯ ಮುಖ್ಯಸ್ಥ ಅಬು ಬಕರ್ ಅಲ್ ಬಗ್ದಾದಿ ಸಾವನ್ನಪ್ಪಿರುವುದಾಗಿ ರೇಡಿಯೋ ಇರಾನ್ ವರದಿ ಮಾಡಿದೆ.
ಅಬು ಬಕರ್ ಅಲ್ ಬಗ್ದಾದಿ ಸಾವನ್ನಪ್ಪಿರುವುದಾಗಿ ರೇಡಿಯೋ ಇರಾನ್ ವರದಿ ಮಾಡಿರುವುದಾಗಿ ಆಲ್ ಇಂಡಿಯಾ ರೇಡಿಯೋ(ಎಐಆರ್) ಟ್ವೀಟ್ ಮಾಡಿದೆ.
ಕಳೆದ ಮಾರ್ಚ್ ನಲ್ಲಿ ಅಮೆರಿಕ ನೇತೃತ್ವದ ಜಂಟಿ ಪಡೆ ನಡೆಸಿದ ವೈಮಾನಿಕ ದಾಳಿಯಲ್ಲಿ ಐಸಿಸ್ ನಾಯಕ ಅಬು ಬಕರ್ ಅಲ್ ಬಗ್ದಾದಿ ಮಾರಣಾಂತಿಕ ಸ್ಥಿತಿಯಲ್ಲಿ ಗಾಯಗೊಂಡಿರುವುದಾಗಿ ಗಾರ್ಡಿಯನ್ ಕಳೆದ ವಾರ ವರದಿ ಮಾಡಿತ್ತು.
ಆ ನಿಟ್ಟಿನಲ್ಲಿ ಬಗ್ದಾದಿ ಐಸಿಸ್ ಉಗ್ರ ಕಾರ್ಯಾಚರಣೆ ಮೇಲೆ ಹಿಡಿತ ಹೊಂದಿಲ್ಲ. ಯಾಕೆಂದರೆ ಬಗ್ದಾದಿ ಚೇತರಿಕೆ ಕಾಣದಷ್ಟು ಗಾಯಗೊಂಡಿರುವುದಾಗಿ ವರದಿ ವಿಶ್ಲೇಷಿಸಿತ್ತು.
ಏತತ್ಮಧ್ಯೆ ಮಾರ್ಚ್ 18ರಂದು ಸಿರಿಯಾ ಗಡಿಭಾಗದ ಅಲ್ ಬಾಜ್ ನಲ್ಲಿ ಅಮೆರಿಕ ಪಡೆ ನಡೆಸಿದ ವೈಮಾನಿಕ ದಾಳಿಯಲ್ಲಿ ಐಸಿಸ್ ಮುಖ್ಯಸ್ಥ ಬಗ್ದಾದಿ ಗಂಭೀರವಾಗಿ ಗಾಯಗೊಂಡಿರುವ ಬಗ್ಗೆ ಯಾವುದೇ ಪುರಾವೆ ಇಲ್ಲ ಎಂದು ಅಮೆರಿಕ ಹೇಳಿದೆ. ಅಲ್ಲದೇ ಐಸಿಸ್ ಕೂಡಾ ಈ ಬಗ್ಗೆ ಯಾವುದೇ ಪ್ರಕಟಣೆ, ಸ್ಪಷ್ಟನೆ ನೀಡಿಲ್ಲ.