ಟೆಕ್ಸಾಸ್ : ಅಮೆರಿಕಾದಲ್ಲಿ ಹಿಂದೂ ದೇವಲಾಯಗಳ ಮೇಲೆ ದಾಳಿ ನಡೆದಿದೆ. ಯು.ಎಸ್ ನ ನಾರ್ತ್ ಟೆಕ್ಸಾಸ್ ನಲ್ಲಿ ಘಟನೆ ನಡೆದಿದ್ದು, ಹಿಂದೂಗಳು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ದೇವಾಲಯಗಳ ಬಾಗಿಲ ಮೇಲೆ ದೆವ್ವದ ಆರಾಧನೆ ಎಂದು ಬರೆದು ಹಿಂದೂಗಳ ಧಾರ್ಮಿಕ ಭಾವನೆಗೆ ಧಕ್ಕೆ ಉಂಟುಮಾಡಲಾಗಿದೆ. ಕ್ಯಾಥೊಲಿಕ್ ಪ್ರಾಬಲ್ಯ ಹೆಚ್ಚಾಗಿರುವ ಸಾಲ್ವಡಾರ್ ಮೂಲದವರು ನಿರ್ಮಿಸಿರುವ ಸಂಘಟನೆ ಅಮೆರಿಕಾದಲ್ಲಿ ಸಕ್ರಿಯವಾಗಿದ್ದು, ಈ ಸಂಘಟನೆ ದೇವಾಲಯಗಳ ಮೇಲೆ ದಾಳಿ ನಡೆಸಿದೆ ಎಂದು ತಿಳಿದುಬಂದಿದೆ.
ದೇವಾಲಯಗಳ ಮೇಲೆ ದಾಳಿ ನಡೆದಿರುವ ಬಗ್ಗೆ ಅಮೆರಿಕಾದ ಸುದ್ದಿ ವಾಹಿನಿಗಳು ವರದಿ ಪ್ರಕಟಿಸಿವೆ. ಸುದ್ದಿ ವಾಹಿನಿಗಳಿಗೆ ಪ್ರತಿಕ್ರಿಯೆ ನೀಡಿರುವ ಹಿಂದೂ ದೇವಾಲಯ ಮಂಡಳಿಯ ಸದಸ್ಯ ಕೃಷ್ಣ ಸಿಂಗ್, ಹಿಂದೂಗಳ ವಿರುದ್ಧ ದೇವಾಲಯದ ಬಾಗಿಲಲ್ಲಿ ಗೀಚಿರುವುದು ಆಘಾತ ಉಂಟುಮಾಡಿದೆ ಎಂದು ಹೇಳಿದ್ದಾರೆ. ಇನ್ನು ಭಾರತಕ್ಕೆ ಧಾರ್ಮಿಕ ಸಹಿಷ್ಣುತೆಯ ಬಗ್ಗೆ ಅಮೆರಿಕಾ ಅಧ್ಯಕ್ಷ ಬರಾಕ್ ಒಬಾಮ ಪಾಠ ಮಾಡಿದ್ದರು. ಆದರೆ ಅಮೆರಿಕಾದ ಯಾವುದೇ ಕ್ರಿಶ್ಚಿಯನ್ ಮುಖಂಡರೂ ಸಹ ದೇವಾಲಯದ ಮೇಲೆ ನಡೆದಿರುವ ದಾಳಿಯನ್ನು ಖಂಡಿಸಿಲ್ಲ.
ಆದರೆ ಧಾರ್ಮಿಕ ಕೇಂದ್ರದ ನೆರೆಯಲ್ಲಿರುವ ಅಮೆರಿಕನ್ನರು ದೇವಾಲಯದ ಪುನಶ್ಚೇತನಕ್ಕಾಗಿ ನೆರವು ನೀಡಲು ಮುಂದಾಗಿದ್ದಾರೆ. ದೇವಾಲಯದ ಮೇಲೆ ನಡೆದಿರುವ ದಾಳಿಯ ಬಗ್ಗೆ ತನಿಖೆ ನಡೆಸಬೇಕೆಂದು ದೇವಾಲಯ ಮಂಡಳಿಯ ಸದಸ್ಯ ಕೃಷ್ಣ ಸಿಂಗ್ ಆಗ್ರಹಿಸಿದ್ದಾರೆ. ಕಳೆದ 2 ತಿಂಗಳ ಹಿಂದೆಯೂ ಅಮೆರಿಕಾದಲ್ಲಿ ಹಿಂದೂ ದೇವಾಲಯದ ಮೇಲೆ ದಾಳಿ ನಡೆಸಲಾಗಿತ್ತು.