ಬೆಂಗಳೂರು : ಏ.3ರಿಂದ ಆರಂಭವಾಗಲಿರುವ ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿ ಸಭೆ ಹಿನ್ನಲೆಯಲ್ಲಿ ರಾಷ್ಟ್ರೀಯ ಪದಾಧಿಕಾರಿಗಳ ಸಭೆ ಆರಂಭವಾಗಿದೆ.
ಬೆಂಗಳೂರಿನ ಖಾಸಗಿ ಹೋಟೆಲ್ ನಲ್ಲಿ ಆರಂಭವಾಗಿರುವ ಸಭೆಗೆ ಪಕ್ಷದ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಚಾಲನೆ ನೀಡಿದರು. ಉತ್ತರ ಭಾರತದಲ್ಲಿ ಪ್ರಭಲವಾಗಿರು ಬಿಜೆಪಿ ದಕ್ಷಿಣ ಭಾರತದಲ್ಲಿಯೂ ತನ್ನ ಅಜೆಂಡಾ ಸ್ಥಾಪಿಸುವ ನಿಟ್ತಿನಲ್ಲಿ ಹಾಗೂ ಪಕ್ಷ ಬಲವರ್ಧನೆಗಾಗಿ ಮುಂದಿನ ಕಾರ್ಯತಂತ್ರ ರೂಪಿಸುವ ಕುರಿತು ಕಾರ್ಯಕಾರಿಣಿಯಲ್ಲಿ ಮಹತ್ವದ ಚರ್ಚೆ ನಡೆಯಲಿದೆ.
ಪಕ್ಷದ ಹಿರಿಯ ನಾಯಕರಾದ ಎಲ್.ಕೆ. ಅಡ್ವಾಣಿ, ಮುರಳಿ ಮನೋಹರ ಜೋಷಿ, ಗೃಹ ಸಚಿವ ರಾಜನಾಥ್ ಸಿಂಗ್, ಹಣಕಾಸು ಸಚಿವ ಅರುಣ್ ಜೇಟ್ಲಿ, ಬಿ.ಎಸ್.ಯಡಿಯೂರಪ್ಪ, ಪ್ರಹ್ಲಾದ್ ಜೋಷಿ, ಮಾಜಿ ಸಿಎಂ ಜಗದೀಶ್ ಶೆಟ್ಟರ್, ಸಚಿವ ಅನಂತ್ ಕುಮಾರ್, ಸಿ.ಟಿ.ರವಿ,ರಾಷ್ಟ್ರೀಯ ಸಹ ಸಂಘಟನಾ ಕಾರ್ಯದರ್ಶಿ ಸಂತೋಷ್ ಸೇರಿದಂತೆ ಇತರ ಪ್ರಮುಖರು ಸಭೆಯಲ್ಲಿ ಭಾಗವಹಿಸಿದ್ದಾರೆ.
ರಾಷ್ಟ್ರೀಯ ಕಾರ್ಯಕಾರಿಣಿಯಲ್ಲಿ ಭಾಗವಹಿಸಲು ಪ್ರಧಾನಿ ನರೇಂದ್ರ ಮೋದಿ ಗುರುವಾರ ಮಧ್ಯಾಹ್ನ ನಗರಕ್ಕೆ ಬರಲಿದ್ದಾರೆ. ಸಂಜೆ ಪದಾಧಿಕಾರಿಗಳ ಸಭೆಯಲ್ಲಿ ಭಾಗವಹಿಸಲಿದ್ದಾರೆ. ಬಳಿಕ ರಾಜ್ಯದ ಸಂಸದರು, ಶಾಸಕರು, ಕಾರ್ಯಕಾರಿಣಿಗೆ ಬರುವ ಎಲ್ಲ ಮುಖಂಡರ ಜತೆ ಸೌಹಾರ್ದ ಸಭೆ ನಡೆಸಲಿದ್ದಾರೆ. ನಂತರ ಅವರೊಟ್ಟಿಗೆ ಭೋಜನ ಸವಿಯಲಿದ್ದಾರೆ.