ಪಾಟ್ನಾ : ಬಿಹಾರದ ಬಹದ್ದೂರ್ ಪುರದಲ್ಲಿ ಸ್ಫೋಟಗೊಂಡಿದ್ದ ಬಾಂಬ್, ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಅವರನ್ನು ಗುರಿಯಾಗಿರಿಸಿಕೊಂಡು ತಯಾರಿಸಲಾಗಿತ್ತು ಎಂದು ತಿಳಿದುಬಂದಿದೆ.
ಮಾ.31ರಂದು ಬಿಹಾರದ ಬಹದ್ದೂರ್ ಪುರದ ಫ್ಲಾಟ್ ಒಂದರಲ್ಲಿ ಕಡಿಮೆ ತೀವ್ರತೆಯ ಬಾಂಬ್ ಸ್ಫೋಟಗೊಂಡಿತ್ತು. ಬಾಂಬ್ ತಯಾರಿಸುತ್ತಿರುವಾಗಲೇ ಸ್ಫೋಟ ಸಂಭವಿಸಿತ್ತು. ಏ.14ರಂದು ಬಿಹಾರದಲ್ಲಿ ನಡೆಯಬೇಕಿದ್ದ ಅಮಿತ್ ಶಾ ಅವರ ರ್ಯಾಲಿ ಸಂದರ್ಭದಲ್ಲಿ ಸ್ಫೋಟಿಸುವುದಕ್ಕಾಗಿ ಈ ಬಾಂಬ್ ತಯಾರಿಸಲಾಗುತ್ತಿತ್ತು ಎಂಬ ಶಂಕೆ ವ್ಯಕ್ತವಾಗಿದೆ.
ಬಿಹಾರದಲ್ಲಿ ವಿಧಾನಸಭಾ ಚುನಾವಣೆ ನಡೆಯಲಿರುವ ಹಿನ್ನೆಲೆಯಲ್ಲಿ ಗಾಂಧಿ ಮೈದಾನದಲ್ಲಿ ಏ.14ರಂದು ಅಮಿತ್ ಶಾ ಬಿಜೆಪಿ ರ್ಯಾಲಿಯಲ್ಲಿ ಭಾಗವಹಿಸಲಿದ್ದಾರೆ. ಇದಕ್ಕೂ ಕೆಲವೇ ದಿನಗಳ ಮುಂದೆ ತಯಾರಿಕೆಯ ಹಂತದಲ್ಲಿದ್ದ ಬಾಂಬ್ ಸ್ಫೋಟಗೊಂಡಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ. ಫ್ಲಾಟ್ ನಲ್ಲಿ ತಯಾರಿಸುತ್ತಿದ್ದ ಬಾಂಬ್ ನ್ನು ಅಮಿತ್ ಶಾ ಭಾಗವಹಿಸಲಿರುವ ರ್ಯಾಲಿಯಲ್ಲಿ ಸ್ಫೋಟಗೊಳಿಸಲು ನಿರ್ಧರಿಸಲಾಗಿತ್ತು ಎಂಬ ಬಲವಾದ ಶಂಕೆ ತನಿಖಾಧಿಕಾರಿಗಳಲ್ಲಿ ಮೂಡಿದೆ.
2013ರಲ್ಲಿ ಪ್ರಧಾನಿ ಅಭ್ಯರ್ಥಿಯಾಗಿದ್ದ ನರೇಂದ್ರ ಮೋದಿ ಅವರು ಗಾಂಧಿ ಮೈದಾನದಲ್ಲಿ ಭಾಗವಹಿಸಿದ್ದ ರ್ಯಾಲಿಯಲ್ಲೂ ಬಾಂಬ್ ಸ್ಫೋಟಗೊಂಡಿತ್ತು. ಇದಕ್ಕೂ ಫ್ಲಾಟ್ ನಲ್ಲಿ ನಡೆದಿರುವ ಬಾಂಬ್ ಸ್ಫೋಟಕ್ಕೂ ಸಂಬಂಧವಿರುವ ಬಗ್ಗೆ ಪೊಲೀಸ್ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ.
ಮಾ.31ರಂದು ನಡೆದ ಸ್ಫೋಟದಲ್ಲಿ ಯಾವುದೇ ಅನಾಹುತ ಸಂಭವಿಸಿರಲಿಲ್ಲ. ಸುದ್ದಿ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ಆಗಮಿಸಿದ್ದ ಪೊಲೀಸ್ ಅಧಿಕಾರಿಗಳು ಉಳಿದ 2 ಜೀವಂತ ಬಾಂಬ್ ಗಳನ್ನು ನಿಷ್ಕ್ರಿಯಗೊಳಿಸಿದ್ದರು. ಫ್ಲಾಟ್ ನಲ್ಲಿ ಅನುಮಾನಾಸ್ಪದವಾಗಿ ಇಬ್ಬರು ಯುವಕರಿದ್ದ ಬಗ್ಗೆ ಮಾಹಿತಿ ಪಡೆದಿರುವ ಪೊಲೀಸ್ ಅಧಿಕಾರಿಗಳು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.