ಜಮ್ಮು-ಕಾಶ್ಮೀರ : 'ಜಮ್ಮು-ಕಾಶ್ಮೀರ'ದ ಕತುವಾ ಜಿಲ್ಲೆಯ ಪೊಲೀಸ್ ಠಾಣೆಯೊಂದಕ್ಕೆ ನುಗ್ಗಿದ ಉಗ್ರರು ಒಬ್ಬ ಗಡಿ ಭದ್ರತಾ ಪಡೆ ಸಿಬ್ಬಂದಿ ಸೇರಿದಂತೆ ಇಬ್ಬರನ್ನು ಹತ್ಯೆ ಮಾಡಿದ್ದಾರೆ.
ಉಗ್ರರ ದಾಳಿಯಲ್ಲಿ ಇಬ್ಬರು ಮೃತಪಟ್ಟು ಇತರೆ ಮೂವರು ಗಾಯಗೊಂಡಿದ್ದಾರೆ. 4 ಜನ ಸಶಸ್ತ್ರ ಉಗ್ರರು ಕತುವಾದ ರಾಜ್ ಬಾಗ್ ಪೊಲೀಸ್ ಠಾಣೆಯ ಮೇಲೆ ದಾಳಿ ನಡೆಸಿ ಈ ಕೃತ್ಯ ಎಸಗಿದ್ದಾರೆ. ಎಕೆ-47, ಗ್ರೆನೇಡ್ ಸೇರಿದಂತೆ ಸುಧಾರಿತ ಶಸ್ತ್ರಾಸ್ತ್ರಗಳನ್ನು ಹೊಂದಿದ್ದ ಈ ಉಗ್ರರು ಫಿದಾಯೀನ್ ಭಯೋತ್ಪಾದನಾ ಗುಂಪಿಗೆ ಸೇರಿದವರೆಂದು ತಿಳಿದುಬಂದಿದೆ.
ಈ ದಾಳಿಯಲ್ಲಿ ಒಬ್ಬ ಸಿಬ್ಬಂದಿ ಸ್ಥಳದಲ್ಲೇ ಸಾವನ್ನಪ್ಪಿದರೆ, ಮತ್ತೊಬ್ಬ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಗೆ ಸಾಗಿಸುವ ಮಾರ್ಗದಲ್ಲಿ ಅವರೂ ಕೊನೆಯುಸಿರೆಳೆದಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ. ನಾಗರಿಕರಿಬ್ಬರು ಸೇರಿದಂತೆ ಮೂವರು ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಉಗ್ರರು ರಾಜ್ ಬಾಗ್ ಪೊಲೀಸ್ ಠಾಣೆಯಲ್ಲಿ ಅವಿತುಕೊಂಡಿದ್ದು, ಗುಂಡಿನ ಚಕಮಕಿ ನಡೆಯುತ್ತಿದೆ. ಸ್ಥಳದಲ್ಲಿ ಹೆಚ್ಚಿನ ಸಂಖ್ಯೆಯ ಪೊಲೀಸ್ ಹಾಗೂ ಭದ್ರತಾ ಪಡೆಗಳನ್ನು ನಿಯೋಜಿಸಲಾಗಿದೆ. ಭಾರೀ ಸಂಖ್ಯೆಯ ಭದ್ರತಾ ಪಡೆ ಠಾಣೆಯನ್ನು ಸುತ್ತುವರಿದಿದೆ.
ಮುಂಜಾಗ್ರತಾ ಕ್ರಮವಾಗಿ ಜಮ್ಮು-ಪಠಾಣ್ಕೋಟ್ ಹೆದ್ದಾರಿಯನ್ನು ಬಂದ್ ಮಾಡಲಾಗಿದೆ. ಈ ಬಗ್ಗೆ ಮಾಹಿತಿ ನೀಡಿರುವ ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಪರಿಸ್ಥಿತಿಯನ್ನು ನಿಕಟವಾಗಿ ಅವಲೋಕಿಸುವಂತೆ ಗೃಹ ಖಾತೆ ಕಾರ್ಯದರ್ಶಿಗೆ ಸೂಚಿಸಲಾಗಿದೆ ಎಂದು ಹೇಳಿದ್ದಾರೆ.