ಬೆಂಗಳೂರು : ಐಎಎಸ್ ಅಧಿಕಾರಿ ಡಿ.ಕೆ.ರವಿ ನಿಗೂಢ ಸಾವಿನ ತನಿಖೆಯ ಹೊಣೆಯನ್ನು ರಾಜ್ಯ ಸರ್ಕಾರ ಮತ್ತೆ ಸಿಐಡಿ ಐಜಿಪಿ ಪ್ರಣವ್ ಮೊಹಾಂತಿ ಹೆಗಲಿಗೇರಿಸಿದೆ. ಆ ಮೂಲಕ ಪ್ರಣವ್ ಮೊಹಾಂತಿ ವರ್ಗಾವಣೆಯನ್ನು ತಡೆ ಹಿಡಿಯುವ ಮಹತ್ವದ ತೀರ್ಮಾನವನ್ನು ರಾಜ್ಯ ಸರ್ಕಾರ ಸಚಿವ ಸಂಪುಟ ಸಭೆಯಲ್ಲಿ ತೆಗೆದುಕೊಂಡಿದೆ.
ಡಿ.ಕೆ.ರವಿ ನಿಗೂಢ ಸಾವಿನ ಪ್ರಕರಣವನ್ನು ಸಿಐಡಿ ತನಿಖೆಗೆ ವಹಿಸಿದ ಮರುದಿನವೇ ಸಿಐಡಿ ಐಜಿಪಿ ಪ್ರಣವ್ ಮೊಹಾಂತಿ ಅವರನ್ನು ರಾಜ್ಯ ಸರ್ಕಾರ ವರ್ಗಾವಣೆ ಮಾಡಿತ್ತು. ಖಡಕ್ ಅಧಿಕಾರಿಯೆಂದೇ ಹೆಸರು ಪಡೆದ ಪ್ರಣವ್ ಮೊಹಾಂತಿ ಅವರನ್ನು ಸಿಐಡಿ ವಿಭಾಗದಿಂದ ಲೋಕಾಯುಕ್ತಕ್ಕೆ ಬುಧವಾರ ಸರ್ಕಾರ ವರ್ಗಾವಣೆ ಮಾಡಿ ಆದೇಶ ನೀಡಿತ್ತು.
ಮೊಹಾಂತಿ ಅವರಿಂದ ತೆರವಾದ ಸ್ಥಾನಕ್ಕೆ ಆಂತರಿಕ ಭದ್ರತಾ ವಿಭಾಗದ ಐಜಿಪಿ ಸಿ.ಎಚ್. ಪ್ರತಾಪ್ ರೆಡ್ಡಿ ಅವರನ್ನು ನಿಯೋಜಿಸಲಾಗಿತ್ತು. ಆದರೆ ಸರ್ಕಾರದ ಈ ನಿರ್ಧಾರ ವಿಪಕ್ಷಗಳ ಆಕ್ರೋಶಕ್ಕೆ ಕಾರಣವಾಗಿತ್ತು. ಅಲ್ಲದೇ ರಾಜ್ಯ ಸರ್ಕಾರದ ಈ ನಡೆ ಹಲವು ಅನುಮಾನಗಳಿಗೂ ಎಡೆಮಾಡಿಕೊಟ್ಟಿತ್ತು. ಇದೀಗ ಎಚ್ಚೆತ್ತುಕೊಂಡ ಸರ್ಕಾರ ಮೊಹಾಂತಿ ವರ್ಗಾವಣೆ ತಡೆ ಹಿಡಿದಿದೆ.