ನವದೆಹಲಿ : 'ಭೂಸ್ವಾಧೀನ ಕಾಯ್ದೆ'ಗೆ ವಿರೋಧ ವ್ಯಕ್ತಪಡಿಸಿರುವ ಕಾಂಗ್ರೆಸ್, ರಾಷ್ಟ್ರಪತಿ ಭವನದವರೆಗೂ ಪ್ರತಿಭಟನಾ ಮೆರವಣಿಗೆ ಹಮ್ಮಿಕೊಂಡಿದೆ.
ಕಾಯ್ದೆಯನ್ನು ವಿರೋಧಿಸುತ್ತಿರುವ ಇನ್ನಿತರ ವಿರೋಧ ಪಕ್ಷಗಳ ನೇತೃತ್ವ ವಹಿಸಲಿರುವ ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ, ವಿಜಯ್ ಚೌಕ್ ನಿಂದ ರಾಷ್ಟ್ರಪತಿ ಭವನದ ವರೆಗೂ ಪ್ರತಿಭಟನಾ ಮೆರವಣಿಗೆಯಲ್ಲಿ ಪಾಲ್ಗೊಳ್ಳಲಿದ್ದಾರೆ.
ಸೋನಿಯಾ ಗಾಂಧಿ ಅವರು ಪಾಲ್ಗೊಳ್ಳಲಿರುವ ಈ ಪ್ರತಿಭಟನಾ ಮೆರವಣಿಗೆಯಲ್ಲಿ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಹಾಗೂ ಕನಿಷ್ಠ 10 ಪಕ್ಷಗಳ ಸದಸ್ಯರು ಭಾಗವಹಿಸಲಿದ್ದಾರೆ. ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡ, ಸಿಪಿಐ-ಎಂ ನ ಸೀತಾರಾಮ್ ಯೆಚೂರಿ, ಸಿಪಿಐ ನ ಡಿ.ರಾಜ, ತೃಣಮೂಲ ಕಾಂಗ್ರೆಸ್ ಪಕ್ಷದ ನಾಯಕ ದಿನೇಶ್ ತ್ರಿವೇದಿ, ಸಮಾಜವಾದಿ ಪಕ್ಷದ ರಾಮ್ ಗೋಪಾಲ್ ಯಾದವ್, ಡಿ.ಎಂ.ಕೆಯ ಕನಿಮೋಳಿ, ಐ.ಎನ್.ಎಲ್.ಡಿ ಪಕ್ಷದ ದುಷ್ಯಂತ್ ಚೌಟಾಲ, ಆರ್.ಜೆ.ಡಿ ಪಕ್ಷದ ಚಾಂದ್ ಗುಪ್ತಾ ಪ್ರತಿಭಟನಾ ಮೆರವಣಿಯಲ್ಲಿ ಭಾಗವಹಿಸುವ ನಿರೀಕ್ಷೆ ಇದೆ.
ಪ್ರತಿಭಟನಾ ಮೆರವಣಿಗೆ ನಂತರ, ಭೂಸ್ವಾಧೀನ ಕಾಯ್ದೆಯನ್ನು ವಿರೋಧಿಸಿ ವಿಪಕ್ಷಗಳು ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಲಿದ್ದಾರೆ. ಇದೇ ವಿಷಯಕ್ಕೆ ಸಂಬಂಧಿಸಿದಂತೆ ಮಾ.16ರಂದು ಯುವ ಕಾಂಗ್ರೆಸ್ ನಾಯಕರು ಜಂತರ್ ಮಂತರ್ ನಲ್ಲಿ ನಡೆಸಿದ್ದ ಪ್ರತಿಭಟನೆಯಲ್ಲಿ ಸೋನಿಯಾ ಗಾಂಧಿ ಭಾಗವಹಿಸಿರಲಿಲ್ಲ. ಈ ಹಿನ್ನೆಲೆಯಲ್ಲಿ ಮಾ.17ರಂದು ನಡೆಯಲಿರುವ ಕಾಂಗ್ರೆಸ್ ಪ್ರತಿಭಟನೆ ಮಹತ್ವ ಪಡೆದುಕೊಂಡಿದೆ.