ಕೊಲಂಬೋ : 'ಶ್ರೀಲಂಕಾ' ಭಾರತದ ಪ್ರಮುಖ ಆರ್ಥಿಕ ಪಾಲುದಾರ ದೇಶವಾಗಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಸೀಲೊನ್ ಚೇಂಬರ್ ಆಫ್ ಕಾಮರ್ಸ್ನಲ್ಲಿ ಲಂಕಾ ಉದ್ಯಮ ಸಮುದಾಯವನ್ನು ಉದ್ದೇಶಿಸಿ ಮಾತನಾಡುತ್ತಿದ್ದ ಮೋದಿ, ಎಲ್ಲ ಅರ್ಹತೆ ಮತ್ತು ಸಂಪನ್ಮೂಲ ಹೊಂದಿರುವ ಲಂಕಾ, ಭಾರತದ ಪ್ರಬಲಆರ್ಥಿಕ ಪಾಲುದಾರ ದೇಶವಾಗಬೇಕು ಎಂದಿದ್ದಾರೆ.
ಭಾರತದೊಂದಿಗೆ ಇರುವ ವಾಣಿಜ್ಯ ಅಸಮತೋಲನದ ಬಗ್ಗೆ ಲಂಕಾದಲ್ಲಿರುವ ಕಳವಳವನ್ನು ನಿವಾರಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಮೋದಿ ಭರವಸೆ ನೀಡಿದ್ದಾರೆ. ಭಾರತ-ಲಂಕಾ ನಡುವಿನ 2013-14ರ ಸಾಲಿನ ದ್ವಿಪಕ್ಷೀಯ ವಾಣಿಜ್ಯ ವ್ಯವಹಾರ 5.23 ಬಿಲಿಯ ಡಾಲರ್ ಗಳಾಗಿದ್ದು ಭಾರತದ ರಫ್ತು ಈ ಸಾಲಿನಲ್ಲಿ 3.98 ಬಿಲಿಯ ಡಾಲರ್ ಗಳಾಗಿವೆ. ಆದರೆ ಲಂಕಾದ ರಫ್ತು ಪ್ರಮಾಣ 678 ದಶಕ್ಷ ಡಾಲರ್ಗಳಿಗೆ ಸೀಮಿತವಾಗಿದೆ ಎಂದು ಮೋದಿ ಹೇಳಿದರು.
ಬಹುಕಾಲದಿಂದ ಬಾಕಿ ಉಳಿದಿರುವ ಭಾರತ-ಲಂಕಾ ಆರ್ಥಿಕ ಭಾಗೀದಾರಿಕೆಯ ಒಪ್ಪಂದವನ್ನು ಅಂತಿಮಗೊಳಿಸುವುದಕ್ಕೆ ಉಭಯ ದೇಶಗಳು ದಿಟ್ಟ ಹೆಜ್ಜೆಯನ್ನು ಇಡಬೇಕಾಗಿದೆ ಎಂದು ಮೋದಿ ಕರೆ ನೀಡಿದ್ದಾರೆ.