ಭೋಪಾಲ್ : 'ವೃತ್ತಿಪರ ಪರೀಕ್ಷಾ ಮಂಡಳಿ'ಹಗರಣದಲ್ಲಿ ಭಾಗಿಯಾಗಿರುವ ಆರೋಪ ಎದುರಿಸುತ್ತಿರುವ ಮಧ್ಯಪ್ರದೇಶ ರಾಜ್ಯಪಾಲ ರಾಮ್ ನರೇಶ್ ಯಾದವ್ ರಾಜೀನಾಮೆ ನೀಡಿದ್ದಾರೆ.
ರಾಜೀನಾಮೆ ಪತ್ರ ಕೇಂದ್ರ ಗೃಹ ಸಚಿವಾಲಯ ತಲುಪಿದ್ದು ರಾಜ್ಯಪಾಲರ ರಾಜೀನಾಮೆ ಅಂಗೀಕಾರವಾಗಿದೆ.
ಮಧ್ಯಪ್ರದೇಶದಲ್ಲಿ ನಡೆದಿರುವ ವೃತ್ತಿಪರ ಪರೀಕ್ಷಾ ಮಂಡಳಿ ಹಗರಣದಲ್ಲಿ ಭಾಗಿಯಾಗಿರುವ ಆರೋಪದ ಮೇಲೆ ರಾಮ್ ನರೇಶ್ ಯಾದವ್ ವಿರುದ್ಧ ಎಫ್.ಐ.ಆರ್ ದಾಖಲಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಕೇಂದ್ರ ಗೃಹ ಸಚಿವಾಲಯ ರಾಮ್ ನರೇಶ್ ಯಾದವ್ ಅವರಿಗೆ ರಾಜೀನಾಮೆ ನೀಡುವಂತೆ ಸೂಚಿಸಿತ್ತು. ಸೂಚನೆ ಮೇರೆಗೆ ರಾಜ್ಯಪಾಲರು ರಾಜೀನಾಮೆ ನೀಡಿದ್ದಾರೆ.
ರಾಜ್ಯಪಾಲ ರಾಮ್ ನರೇಶ್ ಯಾದವ್ ಅವರ ವಿರುದ್ಧ ವಿಶೇಷ ತನಿಖಾ ತಂಡದ ಪೊಲೀಸರು ಭ್ರಷ್ಟಾಚಾರ ನಿಗ್ರಹ ಕಾಯ್ದೆಯಡಿ ದೂರು ದಾಖಲಿಸಿದ್ದರು. ದೇಶದಲ್ಲಿ ಇದೇ ಪ್ರಥಮ ಬಾರಿಗೆ ಅಧಿಕಾರದಲ್ಲಿದ್ದ ರಾಜ್ಯಪಾಲರ ವಿರುದ್ಧ ಎಫ್.ಐ.ಆರ್ ದಾಖಲಾಗಿತ್ತು.
2014ರ ಡಿಸೆಂಬರ್ ನಲ್ಲಿ ಮಾಜಿ ತಾಂತ್ರಿಕ ಶಿಕ್ಷಣ ಸಚಿವ ಲಕ್ಷ್ಮಿಕಾಂತ್ ಶರ್ಮಾ ಸೇರಿದಂತೆ 129 ಮಂದಿ ವಿರುದ್ಧ ವಿಶೇಷ ತನಿಖಾ ತಂಡದ ಪೊಲೀಸರು ಗ್ರೇಡ್ 2 ಹಾಗೂ 3 ರ ಕಾಂಟ್ರಾಕ್ಟ್ ಬೇಸ್ಡ್ ಅಧ್ಯಾಪಕರ ನೇಮಕಾತಿಯಲ್ಲಿ ಅಕ್ರಮ ನಡೆದಿದೆ ಎಂದು ಎಫ್ಐಆರ್ ದಾಖಲು ಮಾಡಿಕೊಂಡಿದ್ದರು. ಈ ವೇಳೆ ಮಧ್ಯಪ್ರದೇಶದ ರಾಜ್ಯಪಾಲರಾಗಿದ್ದ ರಾಮ್ ನರೇಶ್ ಯಾದವ್ ಅವರ ಹೆಸರೂ ಕೇಳಿಬಂದಿತ್ತು.