ಹಾಸನ : ಮೂರು ದಿನಗಳ ಕಾಲ ನಡೆಯಲಿರುವ ಸಾಹಿತ್ಯ ಸರಸ್ವತಿಯ ಆರಾಧನೆಗೆ ಗೊಮ್ಮಟಗಿರಿ ಶ್ರವಣಬೆಳಗೊಳ ಸಜ್ಜುಗೊಂಡಿದೆ. 81ನೇ ಅಖೀಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಮುಖ್ಯಮಂತ್ರಿ ಸಿದ್ಧರಾಮಯ್ಯ ಉದ್ಘಾಟನೆ ಮಾಡಿದರು.
ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ್ ಪ್ರಧಾನ ವೇದಿಕೆಯಲ್ಲಿ ನಡೆಯುವ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಉದ್ಘಾಟನಾ ಸಮಾರಂಭಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅದ್ದೂರಿ ಚಾಲನೆ ನೀಡಿದರು. ಕನ್ನಡ ಸಹೋದರ, ಸಹೋದರಿಯರಿಗೆ ನನ್ನ ನಮಸ್ಕಾರ ಎಂದ ಮುಖ್ಯಮಂತ್ರಿ ಸಿದ್ದರಾಮಯ್ಯ, ನುಡಿ ಜಾತ್ರೆಗೆ ಚಾಲನೆ ನೀಡಿದ್ದು ಖುಷಿತಂದಿದೆ. ಡಾ ಸಿದ್ದಲಿಂಗಯ್ಯ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿರುವುದು ಸಂತೋಷವಾಗಿದೆ ಎಂದರು.
ಇದೊಂದು ಐತಿಹಾಸಿಕ ಸಂದರ್ಭ. ಕನ್ನಡ ಭಾಷೆಯ ಅಭಿವೃದ್ಧಿಗೆ ನಾಲ್ವಡಿ ಕೃಷ್ಣರಾಜ ಒಡೆಯರ್ ಕೊಡುಗೆ ಅಪಾರ ಎಂದು ನೆನೆದರು.
ಅಕ್ಷರ ಜಾತ್ರೆಗೆ ಸಾಹಿತಿಗಳು, ಕವಿಗಳು, ಕನ್ನಡಾಸಕ್ತರು ಗೊಮ್ಮಟನಗರಿಗೆ ಆಗಮಿಸಿದ್ದಾರೆ. ಉದ್ಘಾಟನಾ ಕಾರ್ಯಕ್ರಮಕ್ಕೂ ಮೊದಲು ಅಕ್ಷರ ಮೇಳದ ವೇದಿಕೆಯಲ್ಲಿ ನಾಡಗೀತೆ, ರೈತಗೀತೆಗಳನ್ನು ಹಾಡಲಾಯಿತು.
ಇದಕ್ಕೂ ಮೊದಲು ಪ್ರಾಥಮಿಕ ಶಾಲೆಗಳಲ್ಲಿ ಕನ್ನಡ ಭಾಷೆ ಕಡ್ಡಾಯ ಮಾಡುವ ಕುರಿತು ಸಹಿ ಸಂಗ್ರಹ ಕಾರ್ಯಕರಮಕ್ಕೆ ಚಾಲನೆ ನೀಡಲಾಯಿತು. ಸಹಿ ಸಂಗ್ರಹದ ಬಳಿಕ ರಾಷ್ಟ್ರಪತಿ ಪ್ರಣಬ್ ಮುಖರ್ಜಿಯವರಿಗೆ ಕಳುಹಿಸಲಾಗುವುದು. ಕನ್ನಡ ಭಾಷೆಯ ಉಳಿವಿಗಾಗಿ ಸಹಿ ಸಂಗ್ರಹ ಅನಿವಾರ್ಯ ಎಂದು ಸಾಹಿತ್ಯ ಪರಿಷತ್ ಅಧ್ಯಕ್ಷ ಪುಂಡಲಿಕ ಹಾಲಂಬಿ ಅಭಿಪ್ರಾಯಪಟ್ಟರು.
ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರ ಗೌರವ ಉಪಸ್ಥಿತಿಯಲ್ಲಿ ಸಾಹಿತ್ಯ ಸಮ್ಮೇಳನದ ಸ್ವಾಗತ ಸಮಿತಿ ಅಧ್ಯಕ್ಷ , ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಗಣ್ಯರು, ಪ್ರತಿನಿಧಿಗಳನ್ನು ಸ್ವಾಗತಿಸಲಿದ್ದಾರೆ. ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಪುಂಡಲೀಕ ಹಾಲಂಬಿ ಅವರ ಆಶಯ ನುಡಿ, ನಿಕಟಪೂರ್ವ ಸಮ್ಮೇಳನಾಧ್ಯಕ್ಷ ನಾ.ಡಿಸೋಜ ಅವರ ನುಡಿಯ ನಂತರ 81ನೇ ಸಮ್ಮೇಳನದ ಸರ್ವಾಧ್ಯಕ್ಷ ಡಾ.ಸಿದ್ದಲಿಂಗಯ್ಯ ಅವರು ಭಾಷಣ ಮಾಡಲಿದ್ದಾರೆ. ಕೇಂದ್ರ ಸಚಿವ ಅನಂತಕುಮಾರ್ ಅವರು ಸ್ಮರಣ ಸಂಚಿಕೆ ಬಿಡುಗಡೆ ಮಾಡಲಿದ್ದಾರೆ.