ನವದೆಹಲಿ : ಪ್ರಧಾನಿ ನರೇಂದ್ರ ಮೊದಿ ಮಾನಸ ಸರೋವರ ಯಾತ್ರೆ ಕೈಗೊಳ್ಳುವ ಸಾಧ್ಯತೆ ಇದೆ. ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವೆಲ್ ಅವರು ಪ್ರಧಾನಿ ಮೋದಿ ಅವರು ಕೈಗೊಳ್ಳಲಿರುವ ಮಾನಸ ಸರೋವರ ಯಾತ್ರೆಯ ಸಿದ್ಧತೆಗಳನ್ನು ಪರಿಶೀಲಿಸುತ್ತಿದ್ದಾರೆ ಎಂದು ತಿಳಿದುಬಂದಿದೆ.
ಎಲ್ಲವೂ ಯೋಜನೆಯ ಪ್ರಕಾರವೇ ನಡೆದರೆ ಮೇ ತಿಂಗಳ 2ನೇ ವಾರದಲ್ಲಿ ಪ್ರಧಾನಿ ಮೋದಿ ಮಾನಸ ಸರೋವರ ಯಾತ್ರೆ ಕೈಗೊಳ್ಳಲಿದ್ದಾರೆ ಎಂದು ಹೇಳಲಾಗಿದೆ.
ಮಾನಸ ಸರೋವರಕ್ಕೆ ಸಿಕ್ಕಿಂ ನಾಥುಲ ಮೂಲಕ ಮಾರ್ಗ ತೆರೆಯುವ ಸಂಬಂಧ ಭಾರತ ಮತ್ತು ಚೀನಾ ಈಗಾಗಲೇ ಒಪ್ಪಂದಕ್ಕೆ ಸಹಿ ಹಾಕಿದೆ. ಬೀಜಿಂಗ್ ನಲ್ಲಿ ನಡೆಯಲಿರುವ ರಷ್ಯಾ, ಭಾರತ, ಚೀನಾ ತ್ರಿಪಕ್ಷೀಯ ಸಭೆಯಲ್ಲಿ ಪಾಲ್ಗೊಳ್ಳಲು ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಬೀಜಿಂಗ್ ಗೆ ತೆರಳಲಿದ್ದು ಚೀನಾದೊಂದಿಗೆ ಈ ಬಗ್ಗೆ ಚರ್ಚೆ ನಡೆಸಲಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಮಾನಸಸರೋವರ ಯಾತ್ರೆಗೆ ಎರಡು ಮಾರ್ಗಗಳನ್ನು ಆಯ್ಕೆ ಮಾಡಲಾಗಿದೆ. ಒಂದು ದೆಹಲಿಯಿಂದ ಬಾಗ್ದೋಗ್ರಾ ಹಾಗೂ ಹೆಲಿಕಾಫ್ಟರ್ ಮೂಲಕ ನಾಥುಲಗೆ ತೆರಳಿ ಅಲ್ಲಿಂದ ರಸ್ತೆ ಮಾರ್ಗದಲ್ಲಿ ಮಾನಸ ಸರೋವರಕ್ಕೆ ತೆರಳಲಿದ್ದಾರೆ.
ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರ ಭೇಟಿ ನಂತರ ಚೀನಾಗೆ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವೆಲ್ ಕೂಡ ಭೇಟಿ ನೀಡಲಿದ್ದಾರೆ. ಅಜಿತ್ ದೋವೆಲ್ ಭೇಟಿ ನಂತರವೇ ಪ್ರಧಾನಿ ಮೋದಿ ಅವರು ಮಾನಸ ಸರೋವರಕ್ಕೆ ಕೈಗೊಳ್ಳುವ ಯಾತ್ರೆಯ ಮಾರ್ಗ ನಿರ್ಧಾರವಾಗಲಿದೆ.