ಪ್ಯಾರೀಸ್ : ಪ್ಯಾರಿಸ್ನಲ್ಲಿ ವಿವಾದಾತ್ಮಕ ಕಾರ್ಟೂನ್ ಪ್ರಕಟಿಸಿದ್ದಕ್ಕಾಗಿ ಪತ್ರಿಕಾ ಕಛೇರಿ ಚಾರ್ಲಿ ಹೆಬ್ಡೋ ಮೇಲೆ ದಾಳಿ ನಡೆಸಿದ ಮೂರು ಉಗ್ರರಲ್ಲಿ ಒಬ್ಬನಾದ ಉಗ್ರ ಅಮೆಡಿ ಕುಲಿಬಾಲಿಯನ್ನು ಹೋಲುವ ವ್ಯಕ್ತಿ ಕಳಿಸಿದ ವೀಡಿಯೋ ಸಂದೇಶವೊಂದು ಲಭ್ಯವಾಗಿದೆ.
ಪ್ರಸ್ತುತ ವೀಡಿಯೋವನ್ನು ಆನ್ಲೈನ್ ಮೂಲಕ ಪ್ರಸಾರ ಮಾಡಲಾಗಿದ್ದು, ವೀಡಿಯೋದಲ್ಲಿ ಉಗ್ರ ತಾನು ಇಸ್ಲಾಮಿಕ್ ರಾಜ್ಯದವನೆಂದು ಹೇಳಿಕೊಂಡಿದ್ದಾನೆ. ಅದೇ ವೇಳೆ ಫ್ರೆಂಚ್ ಮುಸ್ಲಿಮರು ಇನ್ನಷ್ಟು ದಾಳಿ ನಡೆಸಿ ಎಂದು ಆದೇಶಿಸಿದ್ದಾನೆ.
7 ನಿಮಿಷಗಳ ವಿಡಿಯೋದಲ್ಲಿ ಸಂದೇಶ ಕಳುಹಿಸಿರುವ ಉಗ್ರ ಅಮೆಡಿ ಕುಲಿಬಾಲಿಯನ್ನು ಹೋಲುವ ವ್ಯಕ್ತಿ, ಪ್ರವಾದಿಯನ್ನು ವ್ಯಂಗ್ಯ ಮಾಡಿದ ಪತ್ರಿಕೆ ಮತ್ತು ಯೆಹೂದಿಯರೇ ನಮ್ಮ ಗುರಿಯಾಗಿತ್ತು ಎಂಬುದನ್ನು ಸಮರ್ಥಿಸಿಕೊಂಡಿದ್ದಾನೆ.
ಉಗ್ರ ಅಮೆಡಿ ಕುಲಿಬಾಲಿ ಜನವರಿ 9ರಂದು ಇಲ್ಲಿನ ಸೂಪರ್ ಮಾರ್ಕೆಟ್ ಮೇಲೆ ದಾಳಿ ನಡೆಸಿ ನಾಲ್ಕು ಮಂದಿಯನ್ನು ಹತ್ಯೆ ಮಾಡಿದ್ದ. ಈ ವೇಳೆ ಪೊಲೀಸರ ಜತೆಗೆ ನಡೆದ ಗುಂಡಿನ ಕಾಳಗದಲ್ಲಿ ಆತ ಮೃತ ಪಟ್ಟಿದ್ದ. ಈತನ ಸ್ನೇಹಿತೆ ಹಯಾತ್ ಬೌಮೆಡಿನೆ ಕೂಡಾ ಉಗ್ರ ಕೃತ್ಯಕ್ಕೆ ಸಂಬಂಧಿಸಿ ತರಬೇತಿ ಪಡೆದಿದ್ದಳು. ಈಕೆಗಾಗಿಯೂ ಹುಡುಕಾಟ ಮುಂದುವರಿದಿದೆ.
ಈ ವೀಡಿಯೊವನ್ನು ಕುಲಿಬಾಲಿ ಸ್ವತಃ ಫ್ರೆಂಚ್ ಭಾಷೆಯಲ್ಲಿ ರೆಕಾರ್ಡಿಂಗ್ ಮಾಡಿ ಕಳುಹಿಸಿದ್ದಾನೆ ಎಂದು ಫ್ರೆಂಚ್ ಉಗ್ರ ನಿಗ್ರಹ ದಳದ ಪೊಲೀಸರು ತಿಳಿಸಿದ್ದಾರೆ.