ಕರಾಚಿ : ಪೇಶಾವರದ ಸೇನಾ ಶಾಲೆಯಲ್ಲಿ ನಡೆದ 180 ಮಂದಿಯ ಹತ್ಯಾಕಾಂಡವನ್ನು ಸಮರ್ಥಿಸಿಕೊಂಡ ಪಾಕಿಸ್ತಾನದ ಮುಸ್ಲೀಂ ಧರ್ಮ ಗುರು ಮುಲ್ಲಾ ಬುರ್ಕಾ ವಿರುದ್ಧ ಪಾಕ್ ಕೋರ್ಟ್ ಬಂಧನ ವಾರೆಂಟ್ ಜಾರಿ ಮಾಡಿದೆ.
'ಮುಲ್ಲಾ ಬುರ್ಕಾ' ಎಂದೇ ಹೆಸರು ವಾಸಿಯಾಗಿದ್ದ ಇಮಾಮ್ ಅಬ್ದುಲ್ ಅಝೀಝ್ ವಿರುದ್ಧ ಪಾಕಿಸ್ತಾನದ ಹೈಕೋರ್ಟ್ ಬಂಧನ ವಾರೆಂಟ್ ಜಾರಿ ಮಾಡಿದೆ.
ತಾಲಿಬಾನ್ ನಮ್ಮ ಸಹೋದರರಂತೆ ಎಂದು ಹೇಳುವ ಮೂಲಕ ತಾಲಿಬಾನ್ ಉಗ್ರ ಸಂಘಟನೆ ನಡೆಸಿದ ದಾಳಿಯನ್ನು ಮುಲ್ಲಾ ಬುರ್ಕಾ ಸಮರ್ಥಿಸಿಕೊಂಡಿದ್ದ. ಬುರ್ಕಾರ ಈ ಹೇಳಿಕೆಯಿಂದ ರೊಚ್ಚಿಗೆದ್ದ ಪಾಕಿಸ್ತಾನದ ನಾಗರಿಕ ಸಮಾಜದ ಗುಂಪು ಅವರನ್ನು ಶಿಕ್ಷೆಗೊಳಪಡಿಸಬೇಕು ಎಂದು ಆಗ್ರಹಿಸಿತ್ತು.
ಮೊದಲಿನಿಂದಲೂ ತಾಲಿಬಾನ್ ಉಗ್ರರಿಗೆ ಪರೋಕ್ಷವಾಗಿ ಈ ಮುಲ್ಲಾ ಬುರ್ಕಾ ಬೆಂಬಲಿಸುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ. ಈ ಮುಲ್ಲಾ ಬುರ್ಕಾ ಪಾಕಿಸ್ತಾನದಲ್ಲಿರುವ ಶಾಲೆಯೊಂದರ ಗಂಥ್ರಾಲಯಕ್ಕೆ ಅಲ್ ಖೈದ ನಾಯಕ ಒಸಮಾ ಬಿನ್ ಲಾಡೆನ್ ಹೆಸರಿಟ್ಟು ಸುದ್ದಿಯಲ್ಲಿದ್ದರು.ಇದರ ಬೆನ್ನಲ್ಲೆ ತಾಲಿಬಾನ್ ಉಗ್ರರ ದಾಳಿಯನ್ನು ಸಮರ್ಥಿಸಿಕೊಂಡಿದ್ದಾರೆ. ಈ ಹಿನ್ನಲೆಯಲ್ಲಿ ಇಮಾಮ್ ಅಬ್ದುಲ್ ಅಝೀಝ್ ವಿರುದ್ಧ ಪಾಕ್ ಕೋರ್ಟ್ ಬಂಧನ ವಾರೆಂಟ್ ಜಾರಿ ಮಾಡಿದೆ.