ಸಿಯೋಲ್ : ಹಾಸ್ಯ-ವ್ಯಂಗ್ಯ ಸಿನೆಮಾ 'ದಿ ಇಂಟರ್ ವ್ಯೂ' ಚಲನಚಿತ್ರದ ಹ್ಯಾಕಿಂಗ್ ವಿವಾದದ ಹಿನ್ನಲೆಯಲ್ಲಿ, ಉತ್ತರ ಕೊರಿಯಾದ ಅಂತರ್ಜಾಲ ವ್ಯವಸ್ಥೆಯನ್ನು ಸ್ಥಗಿತಗೊಳಿಸಿರುವುದ್ದಕ್ಕೆ ಉತ್ತರ ಕೊರಿಯಾ, ಅಮೇರಿಕಾ ಅಧ್ಯಕ್ಷ ಬರಾಕ್ ಒಬಾಮ ಅವರನ್ನು ಕೋತಿ ಎಂದು ಜರಿದಿದೆ.
ಚಿತ್ರ ನಿರ್ಮಾಣ ಸಂಸ್ಥೆ ಸೋನಿ ಪಿಕ್ಚರ್ಸ್ ಮೇಲೆ ನಡೆದ ಸೈಬರ್ ಅಟ್ಯಾಕ್ ದಾಳಿಯಲ್ಲಿ ತನ್ನ ಭಾಗಿತ್ವವನ್ನು ನಿರಾಕರಿಸಿರುವ ಉತ್ತರ ಕೊರಿಯಾ, ದೇಶದ ಸರ್ವಾಧಿಕಾರಿ ಕಿಮ್ ಜಾಂಗ್ ಅನ್ ಅವರ ಹತ್ಯೆಯನ್ನು ಚಿತ್ರಿಸುವ ಸಿನೆಮಾ 'ದಿ ಇಂಟರ್ ವ್ಯೂ' ವಿರುದ್ಧ ಕಿಡಿ ಕಾರಿದೆ.
ಸಿನೆಮಾ ಬಿಡುಗಡೆಯನ್ನು ರದ್ದುಗೊಳಿಸಿರುವುದಾಗಿ ಘೋಷಿಸಿದ್ದ ಸೋನಿ, ಒಬಾಮ ಅವರ ಟೀಕೆಯ ನಂತರ ಈ ವಾರ ಚಿತ್ರಮಂದಿರಗಳಲ್ಲಿ ತೆರೆಕಂಡಿತ್ತು.
ಉತ್ತರ ಕೊರಿಯಾದ ಅತ್ಯುನ್ನತ ಆಡಳಿತ ಸಂಸ್ಥೆ ಕಿಮ್ ನಾಯಕತ್ವದ ರಾಷ್ಟ್ರೀಯ ಭದ್ರತಾ ಸಮಿತಿ, ಚಿತ್ರ ಬಿಡುಗಡೆಗೆ ಶನಿವಾರ ಒಬಾಮ ಅವರನ್ನು ದೂಷಿಸಿದೆ. 'ದಿ ಇಂಟರ್ ವ್ಯೂ' ಸಿನೆಮಾ ಕಾನೂನು ಬಾಹಿರ, ಅಪ್ರಾಮಾಣಿಕ ಹಾಗೂ ಪ್ರತಿಗಾಮಿ. ಒಬಾಮಾ ಉಷ್ಣವಲಯದ ಕಾಡುಗಳ ಕೋತಿಯ ಹಾಗೆ, ಅಜಾಗರೂಕತೆಯ ಮಾತುಗಳನ್ನಾಡುತ್ತಾರೆ ಎಂದು ಪತ್ರಿಕಾ ಹೇಳಿಕೆಯಲ್ಲಿ ಉತ್ತರ ಕೊರಿಯಾದ ಸರ್ಕಾರದ ನೀತಿನಿರ್ವಹಣ ಸಂಸ್ಥೆ ತಿಳಿಸಿದೆ.