ನವದೆಹಲಿ : 'ಸಬ್ಸಿಡಿ ರಹಿತ ಗ್ಯಾಸ್ ಸಿಲಿಂಡರ್' ದರ 113ರೂಪಾಯಿ ಇಳಿಕೆಯಾಗಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ದರ ಇಳಿಕೆಯಾಗಿರುವ ಪರಿಣಾಮ ಡಿ.1ರಿಂದ ಸಿಲಿಂಡರ್ ದರ ಇಳಿಕೆಯಾಗಿದೆ.
ಪ್ರತಿ ಸಿಲಿಂಡರ್ ದರದಲ್ಲಿ 113ರೂಪಾಯಿ ಇಳಿಕೆ ಮಾಡಲು ತೈಲೋತ್ಪನ್ನ ಕಂಪನಿಗಳು ನಿರ್ಧರಿಸಿವೆ. ಇದಲ್ಲದೆ ವೈಮಾನಿಕ ಇಂಧನ ದರದಲ್ಲಿಯೂ ಇಳಿಕೆ ಮಾಡಲಾಗಿದ್ದು, ಶೇ.4.1ರಷ್ಟು ದರವನ್ನು ಇಳಿಕೆ ಮಾಡಲಾಗಿದೆ ಎಂದು ತಿಳಿದು ಬಂದಿದೆ.
ಪ್ರಸ್ತುತ ಬೆಂಗಳೂರಿನಲ್ಲಿ ವಾಣಿಜ್ಯ ಬಳಕೆಯ 14.2 ಕೆಜಿ ತೂಕದ ಅಡುಗೆ ಸಿಲಿಂಡರ್ ನ ಬೆಲೆ 782.50ಕ್ಕಿಳಿದಿದೆ. ಕಳೆದ ಆಗಸ್ಟ್ ತಿಂಗಳಿನಿಂದಲೂ ತೈಲೋತ್ಪನ್ನಗಳು ಇಳಿಕೆಯತ್ತ ಮುಖ ಮಾಡಿದ್ದು, ನಿನ್ನೆಯಷ್ಟೇ ಪೆಟ್ರೋಲ್ ಮತ್ತು ಡೀಸೆಲ್ ದರದಲ್ಲಿ ಇಳಿಕೆಯಾಗಿತ್ತು.
ಕಳೆದ 6 ತಿಂಗಳಿನಿಂದ ತೈಲೋತ್ಪನ್ನಗಳ ದರ ನಿರಂತರವಾಗಿ ಇಳಿಕೆಯಾಗುತ್ತಿದ್ದು ಕಳೆದ 10 ವರ್ಷಗಳಿಂದ ಬೆಲೆ ಏರಿಕೆ ಬಿಸಿ ಎದುರಿಸುತ್ತಿದ್ದ ಸಾಮಾನ್ಯ ಜನರಿಗೆ ಸ್ವಲ್ಪ ಮಟ್ಟಿಗೆ ರಿಲೀಫ್ ದೊರೆತಿದೆ.