ಬೆಂಗಳೂರು : 'ನಿಗಮ-ಮಂಡಳಿ'ಗಳ ಅಧ್ಯಕ್ಷರ ನೇಮಕಾತಿಯಲ್ಲಿ ತಮ್ಮ ಬೆಂಬಲಿಗರಿಗೆ ಸ್ಥಾನ ನೀಡದೇ ಇರುವುದರಿಂದ ಸಿದ್ದರಾಮಯ್ಯ ವಿರುದ್ಧ ಅಸಮಾಧಾನಗೊಂಡಿರುವ ಸಚಿವ ಅಂಬರೀಶ್ ಸಿಎಂ ವಿರುದ್ಧ ವಾಗ್ದಾಳಿ ನಡೆಸಿದ್ದು ಅವರು ನನ್ನನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕಿತ್ತು ಎಂದಿದ್ದಾರೆ.
ನ.28ರಂದು ಕಲಬುರ್ಗಿಯಲ್ಲಿ ನಡೆದ ಸಚಿವ ಸಂಪುಟ ಸಭೆಗೆ ಗೈರಾಗಿದ್ದರ ಬಗ್ಗೆ ಪ್ರತಿಕ್ರಿಯಿಸಿರುವ ಅಂಬರೀಶ್, ನಾಳೆ ನಡೆಯುವ ಡಾ.ರಾಜ್ಕುಮಾರ್ ಸ್ಮಾರಕ ಉದ್ಘಾಟನೆ ಕಾರ್ಯಕ್ರಮದ ಉಸ್ತುವಾರಿ ವಹಿಸಿಕೊಂಡಿರುವುದರಿಂದ ನಾನು ಸಚಿವ ಸಂಪುಟ ಸಭೆಗೆ ಹೋಗಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಇದೇ ವೇಳೆ ಸಿಎಂ ವಿರುದ್ಧವೂ ಅಸಮಾಧಾನ ವ್ಯಕ್ತಪಡಿಸಿರುವ ಅವರು, ನಿಗಮ ಮಂಡಳಿ ಅಧ್ಯಕ್ಷರ ನೇಮಕ ವಿಷಯದಲ್ಲಿ ತಮ್ಮನ್ನು ಸಿದ್ದರಾಮಯ್ಯ ವಿಶ್ವಾಸಕ್ಕೆ ತೆಗೆದುಕೊಳ್ಳಬೇಕಿತ್ತು ಎಂದು ಹೇಳಿದ್ದಾರೆ. ನಾನು ಸಂಸದನಾಗಿ, ಶಾಸಕನಾಗಿ ಕೆಲಸ ಮಾಡಿದ್ದೇನೆ. ಅಲ್ಲದೆ ಸಿದ್ದರಾಮಯ್ಯ ಅವರಿಗಿಂತ ಮೊದಲು ಕಾಂಗ್ರೆಸ್ಗೆ ಬಂದಿದ್ದು ನಾನು. ಹೀಗಾಗಿ ಅವರು ನನ್ನನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕಿತ್ತು ಎಂದು ಅಂಬರೀಶ್ ಹೇಳಿದ್ದಾರೆ.
ಸಂಪುಟ ಸಭೆಗೆ ಎಲ್ಲರೂ ಕಡ್ಡಾಯವಾಗಿ ಹಾಜರಾಗುವಂತೆ ಸಿಎಂ ಸಿದ್ದರಾಮಯ್ಯ ಸೂಚಿಸಿದ್ದರು. ಆದರೆ ನಿಗಮ-ಮಂಡಳಿ ನೇಮಕದಲ್ಲಿ ತಮ್ಮ ಬೆಂಬಲಿಗರಿಗೆ ಸ್ಥಾನ ಸಿಗದ ಹಿನ್ನೆಲೆಯಲ್ಲಿ ಸಚಿವ ಸಂಪುಟ ಸಭೆಗೆ ಗೈರು ಆಗುವ ಮೂಲಕ ಅಂಬರೀಷ್ ತಮ್ಮ ಅಸಮಾಧಾನ ಹೊರ ಹಾಕಿದ್ದಾರೆ ಎನ್ನಲಾಗಿದೆ.
ಕಳೆದ ಎರಡು ದಿನಗಳ ಈ ಹಿಂದೆಯೂ ನಿಗಮ-ಮಂಡಳಿ ನೇಮಕ ಸಂಬಂಧ ಸಿದ್ದರಾಮಯ್ಯ ಅವರ ವಿರುದ್ಧ ವಾಗ್ದಾಳಿ ನಡೆಸಿದ್ದ ಅಂಬಿ, ಸಿಎಂ ನಮ್ಮ ಮಾತಿಗೂ ಬೆಲೆ ಕೊಡಬೇಕು ಎಂದಿದ್ದರು. ಅಲ್ಲದೆ ನನ್ನ ಪರವಾಗಿ ಕೆಲಸ ಮಾಡಿದವರಿಗೆ ನಿಗಮ-ಮಂಡಳಿ ನೇಮಕದಲ್ಲಿ ಅವಕಾಶ ನೀಡದಿದ್ದರೆ ಮುಂದಿನ ತೀರ್ಮಾನ ತೆಗೆದುಕೊಳ್ಳುವುದಾಗಿ ಎಚ್ಚರಿಸಿದ್ದರು.