ನವದೆಹಲಿ : ಭಾರತದ ಪ್ರಧಾನಿ ನರೇಂದ್ರ ಮೋದಿ ಅವರ ಭಾಷಣಗಳಿಂದ ಪ್ರೇರಿತರಾಗಿರುವುದಾಗಿ ಚೀನಾದ ಇ-ಕಾಮರ್ಸ್ ದೈತ್ಯ ಅಲಿಬಾಬಾ ದ ಸ್ಥಾಪಕ ಜ್ಯಾಕ್ ಮಾ ಹೇಳಿದ್ದಾರೆ.
ಭಾರತದ ವ್ಯಾಪಾರ ಸಂಸ್ಥೆ ಎಫ್.ಐ.ಸಿ.ಸಿ.ಐ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಜ್ಯಾಕ್ ಮಾ, ಭಾರತದಲ್ಲಿ ಉದ್ಯಮ ಪ್ರಾರಂಭಿಸುವ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರು ಮಾಡಿದ್ದ ಭಾಷಣದಿಂದ ಪ್ರೇರಿತಗೊಂಡಿರುವುದಾಗಿ ಹೇಳಿದ್ದಾರೆ.
ಭಾರತದ ಟಿ, ಹಾಗೂ ಸಾಂಬಾರ ಪದಾರ್ಥಗಳಿಗೆ ಚೀನಾದಲ್ಲಿ ಅತ್ಯಂತ ಹೆಚ್ಚಿನ ಬೇಡಿಕೆ ಇದೆ. ಪ್ರಧಾನಿ ಮೋದಿ ಅವರ ಭಾಷಣ ಭಾರತ ಹಾಗೂ ಚೀನಾದ ನಡುವೆ ಹೆಚ್ಚು ಔದ್ಯಮಿಕ ಒಪ್ಪಂದಗಳಿಗೆ ಉತ್ತೇಜನ ನೀಡಲಿದೆ ಎಂದು ಜ್ಯಾಕ್ ಮಾ ತಿಳಿಸಿದ್ದಾರೆ. ಭಾರತದ ಮಾರಾಟಗಾರರು ಅಲಿಬಾಬಾ ಇ-ಕಾಮರ್ಸ್ ಮೂಲಕ ಚೀನಾ ಬಳಕೆದಾರರಿಗೆ ಅಗತ್ಯವಿರುವ ವಸ್ತುಗಳನ್ನು ಮಾರಾಟ ಮಾಡಬಹುದು ಎಂದು ಜ್ಯಾಕ್ ಹೇಳಿದ್ದಾರೆ.
ಇದೇ ವೇಳೆ ಭಾರತದಲ್ಲಿನ ಯುವ ಶಕ್ತಿಯನ್ನು ಹೊಗಳಿರುವ ಜ್ಯಾಕ್, ಭಾರತ ಯುವಜನತೆಯನ್ನು ಹೊಂದಿರುವ ಶ್ರೇಷ್ಠ ರಾಷ್ಟ್ರ ಎಂದಿದ್ದಾರೆ. ಜ್ಯಾಕ್ ಮಾ ಚೀನಾದ ಪ್ರಸಿದ್ಧ ಇ-ಕಾಮರ್ಸ್ ಸಂಸ್ಥೆಯ ಸ್ಥಾಪಕರಾಗಿದ್ದಾರೆ.