ನವದೆಹಲಿ : 'ಬಿಜೆಪಿ' ರಾಷ್ಟ್ರೀಯ ಮಟ್ಟದಲ್ಲಿ ಸದಸ್ಯತ್ವ ನೋಂದಣಿ ಅಭಿಯಾನಕ್ಕೆ ನ.1ರಂದು ಚಾಲನೆ ನೀಡಿದೆ. ನವದೆಹಲಿಯ ಬಿಜೆಪಿ ಪ್ರಧಾನ ಕಚೇರಿಯಲ್ಲಿ ಖುದ್ದು ಸದಸ್ಯತ್ವ ಪಡೆಯುವ ಮೂಲಕ ಪ್ರಧಾನಿ ನರೇಂದ್ರ ಮೋದಿ ಸದಸ್ಯತ್ವ ನೋಂದಣಿ ಅಭಿಯಾನಕ್ಕೆ ಚಾಲನೆ ನೀಡಿದ್ದಾರೆ.
ದೇಶಕ್ಕಾಗಿ ದುಡಿಯುವ ಪಕ್ಷದ ಸದಸ್ಯತ್ವ ಪಡೆಯಲು ಹೆಮ್ಮೆಯಾಗುತ್ತಿದೆ ಎಂದು ನೋಂದಣಿ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದ ಮೋದಿ ಸಂತಸ ವ್ಯಕ್ತಪಡಿಸಿದ್ದಾರೆ.
"ಬಿಜೆಪಿಯಲ್ಲಿ ಪ್ರತಿ 6 ವರ್ಷಕ್ಕೆ ಸದಸ್ಯತ್ವವನ್ನು ನವೀಕರಣ ಮಾಡಬೇಕಾಗುತ್ತದೆ. ಇಂದಿನಿಂದ ಪ್ರಾರಂಭವಾಗಿರುವ ಈ ಅಭಿಯಾನದಲ್ಲಿ ಪ್ರತಿಯೊಬ್ಬರೂ ಮತ್ತೊಮ್ಮೆ ಸದಸ್ಯತ್ವವನ್ನು ಪಡೆಯಬೇಕಾಗುತ್ತದೆ. ಕಾಶ್ಮೀರದಿಂದ ಕನ್ಯಾಕುಮಾರಿವರೆಗೆ, ಅಸ್ಸಾಂ ನಿಂದ ಗುಜರಾತ್ ವರೆಗೆ ದೇಶದಲ್ಲಿ 6 ಲಕ್ಷ ಹಳ್ಳಿಗಳಿವೆ. ಪ್ರತಿಯೊಂದು ಹಳ್ಳಿಯಲ್ಲೂ ಬಿಜೆಪಿ ಸದಸ್ಯರು ನೋಂದಣಿಯಾಗಬೇಕೆಂದು ಪ್ರಧಾನಿ ಮೋದಿ ಕರೆ ನೀಡಿದ್ದಾರೆ.
ಇಂದಿನಿಂದ ಪ್ರಾರಂಭವಾಗಿರುವ ಸದಸ್ಯತ್ವ ನೋಂದಣಿ ಅಭಿಯಾನ 2015ರ ಮಾ.31ರವರೆಗೆ ನಡೆಯಲಿದ್ದು, ಅಭಿಯಾನದ ಅಂತ್ಯದ ವೇಳೆಗೆ ಬಿಜೆಪಿ 50 ಲಕ್ಷ ಸದಸ್ಯರನ್ನು ಪಡೆಯುವ ಗುರಿ ಹೊಂದಿದೆ. ಆನ್ ಲೈನ್ ಮೂಲಕವೂ ಸದಸ್ಯತ್ವ ನೋಂದಣಿ ಮಾಡಿಕೊಳ್ಳಬಹುದಾದ ವ್ಯವಸ್ಥೆ ಕಲ್ಪಿಸಲಾಗಿದೆ.