ನವದೆಹಲಿ : ಪ್ರಧಾನಿ ನರೇಂದ್ರ ಮೋದಿ ಅವರನ್ನು ಹೊಗಳಿದ್ದಕ್ಕಾಗಿ ಮಾಜಿ ಕೇಂದ್ರ ಸಚಿವ ಶಶಿ ತರೂರ್ ಅವರನ್ನು ಕಾಂಗ್ರೆಸ್ ವಕ್ತಾರ ಸ್ಥಾನದಿಂದ ವಜಾಗೊಳಿಸಿರುವ ಕ್ರಮವನ್ನು ಬಿಜೆಪಿ ಟೀಕಿಸಿದೆ.
ದೇಶದ ಪ್ರಧಾನಿಯನ್ನು ಶ್ಲಾಘಿಸಿದ್ದಕ್ಕಾಗಿ ಶಶಿ ತರೂರ್ ಅವರನ್ನು ವಕ್ತಾರ ಸ್ಥಾನದಿಂದ ವಜಾಗೊಳಿಸಿರುವುದು ಕಾಂಗ್ರೆಸ್ ಅಸಹಿಷ್ಣುತೆಯ ಅಸಾಮಾನ್ಯ ಪ್ರದರ್ಶನ ಎಂದಿರುವ ಬಿಜೆಪಿ ಮುಖಂಡ ಮುಕ್ತಾರ್ ಅಬ್ಬಾಸ್ ನಖ್ವಿ, ಕಾಂಗ್ರೆಸ್ ನ ಕ್ರಮ ಹೀಗೆ ಮುಂದುವರೆದರೆ ಮುಂದೊಂದು ದಿನ ಕಾಂಗ್ರೆಸ್ ಪಕ್ಷದಲ್ಲಿ ರಾಹುಲ್ ಗಾಂಧಿ ಸೋನಿಯಾ ಗಾಂಧಿ ಇಬ್ಬರೇ ಉಳಿಯಬೇಕಾಗುತ್ತದೆ ಎಂದು ಲೇವಡಿ ಮಾಡಿದ್ದಾರೆ.
ದೇಶಕ್ಕಾಗಿ ಯಾರಾದರೂ ಒಳ್ಳೆಯ ಕೆಲಸ ಮಾಡಿದರೆ ಅದನ್ನು ಶ್ಲಾಘಿಸುವುದರಲ್ಲಿ ತಪ್ಪೇನಿದೆ ಎಂದು ಪ್ರಶ್ನಿಸಿದ್ದಾರೆ. ಅಲ್ಲದೇ ಸ್ವಚ್ಛ ಭಾರತ ಎಂಬುದನ್ನು ಮಹಾತ್ಮಾ ಗಾಂಧಿ ಆರಂಭಿಸಿದ್ದರು. ಗಾಂಧಿ ಹೆಸರು ಹೇಳಿಕೊಂಡು ರಾಜಕೀಯ ಮಾಡುತ್ತಿರುವ ಕಾಂಗ್ರೆಸ್, ಈ ದೇಶದ ಪ್ರಧಾನಿಯನ್ನು ಹೊಗಳಿದ ತನ್ನ ಪಕ್ಷದ ಸದಸ್ಯರನ್ನು 'ಸ್ವಚ್ಛ'ಗೊಳಿಸುತ್ತಿದೆ ಎಂದು ಬಿಜೆಪಿಯ ಮತ್ತೋರ್ವ ಮುಖಂಡ ಸಿದ್ಧಾರ್ಥನಾಥ್ ಸಿಂಗ್ ವ್ಯಂಗ್ಯವಾಡಿದ್ದಾರೆ.
ಗಾಂಧಿ ಜಯಂತಿಯಂದು ಪ್ರಧಾನಿ ನರೇಂದ್ರ ಮೋದಿ ಸ್ವಚ್ಛ ಭಾರತ ಅಭಿಯಾನ ಕ್ರಾರ್ಯಕ್ರಮದಲ್ಲಿ 9 ಗಣ್ಯರಿಗೆ ಆಂಧೋಲನದಲ್ಲಿ ಪಾಲ್ಗೊಳ್ಳುವಂತೆ ಆಹ್ವಾನ ನೀಡಿದ್ದಾಗಿ ಹೇಳಿದ್ದರು. ಅವರಲ್ಲಿ ಶಶಿ ತರೂರ್ ಹೆಸರನ್ನು ನಿರ್ದೇಶನ ಮಾಡಿದ್ದರು.
ಮೋದಿಯವರ ಸ್ವಚ್ಛ ಭಾರತ ಅಭಿಯಾನದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದ ಶಶಿ ತರೂರ್ ಹಲವು ಭಾರೀ ಅವರನ್ನು ಶ್ಲಾಘಿಸಿದ್ದರು. ಇದು ಕೇರಳ ಕಾಂಗ್ರೆಸ್ ಘಟಕದ ಕಣ್ಣು ಕೆಂಪಗಾಗಿಸಿತ್ತು. ಎಚ್ಚರಿಕೆ ಹೊರತಾಗಿಯೂ ತಮ್ಮ ನಡೆಯನ್ನು ಶಶಿ ತರೂರ್ ಸಮರ್ಥಿಸಿಕೊಂಡಿದ್ದರು. ಈ ಹಿನ್ನೆಲೆಯಲ್ಲಿ ಅವರನ್ನು ವಕ್ತಾರ ಸ್ಥಾನದಿಂದ ವಜಾಗೊಳಿಸಲಾಗಿದೆ.