ನವದೆಹಲಿ : ಪ್ರಧಾನಿ ನರೇಂದ್ರ ಮೋದಿ ಅವರ ಕನಸಿನ ಸ್ವಚ್ಛ ಭಾರತ ಅಭಿಯಾನಕ್ಕೆ ಮಿಸ್ಟರ್ ಪರ್ಫೆಕ್ಟ್ ಎಂದೇ ಗುರುತಿಸಿಕೊಂಡಿರುವ ನಟ ಅಮೀರ್ ಖಾನ್ ಬೆಂಬಲ ವ್ಯಕ್ತಪಡಿಸಿದ್ದಾರೆ.
ಪ್ರಧಾನಿ ಅವರ ಸ್ವಚ್ಛ ಭಾರತ ಅಭಿಯಾನವನ್ನು ಸ್ವಾಗತಿಸಿರುವ ಅಮಿರ್ ಖಾನ್, ನಾನು ನನ್ನ ಮನೆ ಮತ್ತು ಕಚೇರಿ ಬಳಿ ಇರುವ ಕಸವನ್ನು ತೆಗೆದು ಸ್ವಚ್ಛಗೊಳಿಸಿದ್ದೇನೆ. ಈ ಮೂಲಕ ಮೋದಿ ಅವರ ಯೋಜನೆಗೆ ಬೆಂಬಲಿಸಿದ್ದೇನೆ ಎಂದಿದ್ದಾರೆ. ದೇಶದ ಜನತೆಯೂ ಮೋದಿ ಅವರ ಸ್ವಚ್ಛ ಭಾರತ ಅಭಿಯಾನಕ್ಕೆ ಬೆಂಬಲಿಸಬೇಕು ಎಂದು ಇದೇ ವೇಳೆ ಅಮಿರ್ ಖಾನ್ ಕರೆ ನೀಡಿದ್ದಾರೆ.
ಇಂದು ಸ್ವಚ್ಛ ಭಾರತ ಅಭಿಯಾನಕ್ಕೆ ಚಾಲನೆ ನೀಡುವ ಮೂಲಕ ಮೋದಿ ಅವರು ಮಹಾತ್ಮ ಗಾಂಧಿ ಅವರಿಗೆ ಉಡುಗೊರೆ ನೀಡಿದ್ದಾರೆ ಎಂದು ಅಮಿರ್ ಖಾನ್ ಅಭಿಪ್ರಾಯಪಟ್ಟಿದ್ದಾರೆ. ಮಹಾತ್ಮ ಗಾಂಧಿ ಜನ್ಮದಿನಾಚರಣೆ ಹಿನ್ನೆಲೆಯಲ್ಲಿ ಅ.2ರಂದು ಪ್ರಧಾನಿ ನರೇಂದ್ರ ಮೋದಿ ಅವರು ಸ್ವಚ್ಛ ಭಾರತ್ ಅಭಿಯಾನಕ್ಕೆ ಚಾಲನೆ ನೀಡಿದ್ದಾರೆ.