ಬೆಂಗಳೂರು : ಮಂಗಳಯಾನ ನೌಕೆಯ ಎಂಜಿನ್ ಪರೀಕ್ಷೆ ಯಶಸ್ವಿಯಾಗಿದ್ದು, ಮಾರ್ಸ್ ಆರ್ಬಿಟರ್ ಮಂಗಳ ಗ್ರಹದತ್ತ ಧಾವಿಸಿದೆ.
ಭಾರತೀಯ ಬಾಹ್ಯಾಕಶ ಸಂಸ್ಥೆ (ಇಸ್ರೋ) ಉಡಾವಣೆ ಮಾಡಿರುವ ಐತಿಹಾಸಿಕ ಮಂಗಳಯಾನ ನೌಕೆ ಕಕ್ಷೆ ಸೇರಲು ಕ್ಷಣಗಣೆ ಆರಂಭವಾಗಿದೆ. ಈ ನಡುವೆ ಇಸ್ರೋ ವಿಜ್ನಾನಿಗಳು ನಡೆಸಿದ ಆರ್ಬಿಟರ್ ಎಂಜಿನ್ ಫೈರಿಂಗ್ ಯಶಸ್ವಿಯಾಗಿದೆ.
ಕಳೆದ 300 ದಿನಗಳಿಂದ ನಿಷ್ಕ್ರಿಯಾವಸ್ಥೆಯಲ್ಲಿರುವ 440 ನ್ಯೂಟನ್ ಲಿಕ್ವಿಡ್ ಅಪೋಜಿ ಮೋಟರ್ ಎಂಜಿನ್ ನ್ನು ನಾಲ್ಕು ಸೆಕೆಂಡುಗಳ ಕಾಲ ಸ್ಟಾರ್ಟ್ ಮಾಡಲಾಗಿತ್ತು. ಈ ಪರೀಕ್ಷೆ ಯಶಸ್ವಿಯಾಗಿದ್ದು, ಇಸ್ರೋ ವಿಜ್ನಾನಿಗಳ ಆತ್ಮವಿಶ್ವಾಸ ಇಮ್ಮಡಿಗೊಂಡಿದೆ.
2013, ನ.5ರಂದು ಆಂಧ್ರಪ್ರದೇಶದ ಶ್ರೀಹರಿಕೋಟಾದಿಂದ ಮಂಗಳಯಾನ ನೌಕೆಯನ್ನು ಇಸ್ರೋ ಉಡಾವಣೆ ಮಾಡಿತ್ತು. ಸೆ.24ರಂದು ಮಾರ್ಸ್ ಆರ್ಬಿಟರ್ ಮಂಗಳ ಗ್ರಹ ತಲುಪಲಿದೆ.
ಸಧ್ಯ ಸೆಕೆಂಡ್ ಗೆ 22.1 ಕಿ.ಮೀಯಂತೆ ಓಡುತ್ತಿರುವ ನೌಕೆಯ ವೇಗವನ್ನು ಸೆಕೆಂಡ್ ಗೆ 4.4 ಕಿ.ಮೀಗೆ ಇಳಿಸಬೇಕಾದ ಹಿನ್ನಲೆಯಲ್ಲಿ 4 ಸೆಕೆಂಡುಗಳ ಕಾಲ ಎಂಜಿನ್ ಅನ್ನು ಚಾಲನೆ ಮಡಲಾಗುತ್ತದೆ. ಈ ಮೂಲಕ ಇಸ್ರೋ ಮಂಗಳ ಯಾನ ಬಹುತೇಕ ಯಶಸ್ವಿಯಾಗಿದ್ದು, ಮೊದಲ ಯತ್ನದಲ್ಲೇ ಮಂಗಳಯಾನದಲ್ಲಿ ಯಶಸ್ಸು ಸಾಧಿಸಿದ ಮೊದಲ ರಾಷ್ಟ್ರ ಎಂಬ ಹೆಗ್ಗಳಿಕೆಗೆ ಭಾರತ ಪಾತ್ರವಾಗಲಿದೆ.