ಬೆಂಗಳೂರು : ರಾಜ್ಯದ ರಾಜ್ಯಪಾಲರಾಗಿ ವಾಜುಭಾಯಿ ವಾಲಾ ಅವರನ್ನು ನೇಮಕಮಾಡಿರುವ ವಿಚಾರಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಧಾನಿ ನರೇಂದ್ರ ಮೋದಿಯವರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯಪಾಲರ ನೇಮಕ ವಿಚಾರದಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಸೌಜನ್ಯಕ್ಕಾದರೂ ನಮ್ಮ ಜತೆ ಚರ್ಚೆ ನಡೆಸಬೇಕಾಗಿತ್ತು. ಆದರೆ ಯಾವುದೇ ಚರ್ಚೆ ನಡೆಸದೇ ವಾಜುಭಾಯಿ ವಾಲಾರನ್ನು ಕರ್ನಾಟತಕದ ರಾಜ್ಯಪಾಲರನ್ನಾಗಿ ನೇಮಕ ಮಾಡಿದ್ದಾರೆ. ಪ್ರಧಾನಿ ಮೋದಿಯವರ ನಡೆ ನಮಗೆ ಬೇಸರ ತಂದಿದೆ ಎಂದರು.
ಯಾರೇ ರಾಜ್ಯಪಾಲರಾಗಿ ನೇಮಕವಾದರೂ ಸಂವಿಧಾನದ ಚೌಕಟ್ಟಿನಲ್ಲಿಯೇ ಕೆಲಸಮಾಡಬೇಕು. ಆದರೆ ಕೇಂದ್ರದಲ್ಲಿ ಯಾವುದೇ ಸರ್ಕಾರವಿದ್ದರೂ ಯಾವುದೇ ರಾಜ್ಯಕ್ಕೆ ರಾಜ್ಯಪಾಲರನ್ನು ನೇಮಕ ಮಾಡುವಾಗ ಆ ರಾಜ್ಯದ ಮುಖ್ಯಮಂತ್ರಿಗಳ ಜತೆ ಚರ್ಚೆ ನಡೆಸುವುದು ಸಂಪ್ರದಾಯ. ಪ್ರಧಾನಿ ಮೋದಿಯವರ ಈ ಧೋರಣೆ ಸರಿಯಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.