BW News Bureau : ಕೇಂದ್ರ ರೈಲ್ವೇ ಸಚಿವ ಡಿ.ವಿ ಸದಾನಂದ ಗೌಡರ ಪುತ್ರ ಕಾರ್ತಿಕ್ ಗೌಡ ಅವರ ವಿರುದ್ಧ ವಂಚನೆ ಪ್ರಕರಣ ದಾಖಲಾಗಿರುವ ಹಿನ್ನೆಲೆಯಲ್ಲಿ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ಕಾಂಗ್ರೆಸ್ ಕಾರ್ಯಕರ್ತರು ಧರಣಿ ನಡೆಸಿದ್ದಾರೆ.
ಬೆಂಗಳೂರಿನ ಮೌರ್ಯ ಸರ್ಕಲ್ನ ಗಾಂಧಿ ಪ್ರತಿಮೆ ಬಳಿ ನೂರಾರು ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದು ಡಿ.ವಿ.ಎಸ್ ಪುತ್ರನ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಸರ್ಕಾರವನ್ನು ಒತ್ತಾಯಿಸಿದ್ದಾರೆ. ಇದೇ ವೇಳೆ ಪುತ್ರನನ್ನು ಕೇಂದ್ರ ಸಚಿವ ಸದಾನಂದ ಗೌಡ ಅವರು ಸಮರ್ಥಿಸಿಕೊಳ್ಳುತ್ತಿದ್ದಾರೆ ಎಂದು ಯುವ ಕಾಂಗ್ರೆಸ್ ಕಾರ್ಯಕರ್ತರು ಆರೋಪಿಸಿದ್ದಾರೆ.
ಪ್ರಕರಣದ ಬಗ್ಗೆ ಪ್ರತಿಕ್ರಿಯಿಸಿರುವ ಗೃಹ ಸಚಿವ ಜಾರ್ಜ್, ಸದಾನಂದ ಗೌಡರ ಪುತ್ರನ ವಿರುದ್ಧ ಕೇಳಿಬಂದಿರುವುದು ರಾಜಕೀಯ ಪ್ರೇರಿತ ಆರೋಪ ಅಲ್ಲ. ಈ ಪ್ರಕರಣದಲ್ಲಿ ರಾಜಕೀಯ ಹುನ್ನಾರ ನಡೆದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ರಾಜಕೀಯ ವಿರೋಧಿಗಳ ಷಡ್ಯಂತ್ರದ ಪರಿಣಾಮ ಕಾರ್ತಿಕ್ ಗೌಡ ವಿರುದ್ಧ ವಂಚನೆ ಆರೋಪ ಕೇಳಿಬಂದಿದೆ ಎಂದು ಸದಾನಂದ ಗೌಡ ಪ್ರತ್ಯಾರೋಪ ಮಾಡಿದ್ದರು.
ಇದೇ ವೇಳೆ ಕಾರ್ತಿಕ್ ಗೌಡ ವಿರುದ್ಧ ಕೇಳಿಬಂದಿರುವ ಆರೋಪ ಸಾಬೀತಾದರೆ ಕ್ರಮ ಕೈಗೊಳ್ಳಲಾಗುವುದು ಎಂದು ಜಾರ್ಜ್ ತಿಳಿಸಿದ್ದಾರೆ.
ಕಾರ್ತಿಕ್ ಗೌಡ ತಮ್ಮನ್ನು ಮದುವೆಯಾಗಿದ್ದಾರೆ ಇದೀಗ ಎರಡನೇ ಮದುವೆಗೆ ಸಿದ್ಧತೆ ನಡೆಸುತ್ತಿದ್ದಾರೆ ಎಂದು ಆರೋಪಿಸಿದ್ದ ನಟಿ ಮೈತ್ರಿಯಾ ಅತ್ಯಾಚಾರ, ಅಪಹರಣ ಹಾಗೂ ವಂಚನೆ ಆರೋಪದಡಿ ಕಾರ್ತಿಕ್ ಗೌಡ ವಿರುದ್ಧ ಆರ್.ಟಿ. ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.