ಬೆಂಗಳೂರು : 'ಉಪಚುನಾವಣೆ' ಫಲಿತಾಂಶದಿಂದ ರಾಜ್ಯದ ಜನತೆ ಕಾಂಗ್ರೆಸ್ ಪರ ಸ್ಪಷ್ಟ ಜನಾದೇಶ ನೀಡಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ರಾಜ್ಯದ 3 ವಿಧಾನಸಭಾ ಕ್ಷೇತ್ರಗಳಿಗೆ ನಡೆದ ಉಪಚುನಾವಣೆ ಫಲಿತಾಂಶ ಆ.25ರಂದು ಪ್ರಕಟವಾಗಿದ್ದು ಕಾಂಗ್ರೆಸ್ 2 ಕ್ಷೇತ್ರಗಳಲ್ಲಿ ಜಯಗಳಿಸಿರುವ ಹಿನ್ನಲೆಯಲ್ಲಿ ಗೃಹ ಕಚೇರಿಯಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಸಿದ್ದರಾಮಯ್ಯ ಸಂತಸ ವ್ಯಕ್ತಪಡಿಸಿದ್ದಾರೆ. ಸರ್ಕಾರದ ಅಭಿವೃದ್ಧಿ ಕಾರ್ಯಗಳನ್ನು ಗುರುತಿಸಿ ರಾಜ್ಯದ ಮತದಾರರು ಕಾಂಗ್ರೆಸ್ ಗೆ ಮತ ನೀಡಿದ್ದಾರೆ ಎಂದು ತಿಳಿಸಿದ್ದಾರೆ.
ಕರ್ನಾಟಕದ ಮತದಾರರು ಪ್ರಜ್ನಾವಂತರಾಗಿದ್ದು ಲೋಕಸಭಾ ಚುನಾವಣೆ, ವಿಧಾನಸಭಾ ಚುನಾವಣೆಯಲ್ಲಿ ಭಿನ್ನ ಫಲಿತಾಂಶ ನೀಡಿದ್ದಾರೆ. ಬಳ್ಳಾರಿಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳ ಗೆಲುವಿನ ಅಂತರ ನಿರೀಕ್ಷೆಗೂ ಮಿರಿದ್ದು ಎಂದು ಸಿದ್ದರಾಮಯ್ಯ ಬಣ್ಣಿಸಿದ್ದಾರೆ. ಶಿಕಾರಿಪುರದಲ್ಲಿ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಎಷ್ಟೇ ಪ್ರಯತ್ನಿಸಿದರೂ ಗೆಲುವಿನ ಅಂತರವನ್ನು ಹೆಚ್ಚಿಸಲು ಸಾಧ್ಯವಾಗಲಿಲ್ಲ. ಶಿಕಾರಿಪುರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸೋಲಿನ ಅಂತರ ಕಡಿಮೆ ಇರುವುದರಿಂದ ಕಾಂಗ್ರೆಸ್ ಪಕ್ಷಕ್ಕೆ ಒಲವು ವ್ಯಕ್ತವಾಗುತ್ತಿದೆ. ಮುಂದಿನ ಚುನಾವಣೆಯಲ್ಲಿ ಶಿಕಾರಿಪುರವನ್ನೂ ಗೆಲ್ಲಲಿದ್ದೇವೆ ಎಂದು ವಿಶ್ವಾಸ ಸಿ.ಎಂ ವ್ಯಕ್ತಪಡಿಸಿದ್ದಾರೆ.
ಲೋಕಸಭಾ ಚುನಾವಣೆಯಲ್ಲಿ ಮೋದಿ ಅಲೆಯಿಂದ ಗೆದ್ದೇ ಬಿಟ್ಟೆವು ಎಂದು ಬಿಜೆಪಿ ನಾಯಕರು ಬೀಗುತ್ತಿದ್ದರು. ಆದರೆ ಫಲಿತಾಂಶ ಬಂದ ನಂತರ ನಡೆದ ಉಪಚುನಾವಣೆಯಲ್ಲಿ ಎಲ್ಲವೂ ಉಲ್ಟಾ ಆಗಿದೆ. ಕಾಂಗ್ರೆಸ್ ಗೆ ಭವಿಷ್ಯವೇ ಇಲ್ಲ ಎಂದು ವರ್ತಿಸುತ್ತಿದ್ದ ಬಿಜೆಪಿಗೆ ಮುಖಭಂಗ ಉಂಟಾಗಿದೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.
ಸಚಿವ ಸಂಪುಟ ಪುನಾರಚನೆ ಮಾಡುವುದಿಲ್ಲ, ಸಂಪುಟ ವಿಸ್ತರಣೆ ಮಾಡಿ ಖಾಲಿ ಇರುವ 4ಸ್ಥಾನಗಳನ್ನು ಭರ್ತಿ ಮಾಡುವುದಾಗಿ ಸಿದ್ದರಾಮಯ್ಯ ತಿಳಿಸಿದ್ದಾರೆ. ಪರಮೇಶ್ವರ್ ಅವರಿಗೆ ಸಚಿವ ಸ್ಥಾನ ನೀಡುವ ವಿಚಾರವನ್ನು ಬೀದಿಯಲ್ಲಿ ಚರ್ಚಿಸುವುದಿಲ್ಲ. ಹೈಕಮಾಂಡ್ ನೊಂದಿಗೆ ಚರ್ಚಿಸುತ್ತೇನೆ ಎಂದಿದ್ದಾರೆ.
ಗೆಲುವಿಗೆ ಸಿ.ಎಂ ಅಭಿವೃದ್ಧಿ ಕಾರ್ಯಗಳೇ ಕಾರಣ: ಏಳು ದಿನವೂ ಚುನಾವಣೆಯ ಪ್ರವಾಸ ಕೈಗೊಂಡ ಸಿಎಂ ಸಿದ್ದರಾಮಯ್ಯ ಅವರ ಜನಪರ ಕಾರ್ಯಕ್ರಮಗಳು ಗೆಲುವಿಗೆ ಮುಖ್ಯಕಾರಣ. ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ನೀಡಿರುವ ಭರವಸೆಗಳನ್ನು ಇನ್ನು 5 ವರ್ಷಗಳಲ್ಲಿ ಪೂರೈಸುತ್ತೇವೆ ಎಂದು ಪರಮೇಶ್ವರ್ ತಿಳಿಸಿದ್ದಾರೆ.
ಕಾಂಗ್ರೆಸ್ ಮೇಲೆ ಭರವಸೆ ಇಟ್ಟು ಮತದಾರರು ನಮ್ಮನ್ನು ಗೆಲ್ಲಿಸಿದ್ದಾರೆ ಎಂದ ಅವರು, ಮತದಾರರು ನಿರೀಕ್ಷಿಸಿರುವ ಉತ್ತಮ ಆಡಳಿತ ನೀಡುತ್ತೇವೆ ಎಂದು ಭರವಸೆ ನೀಡಿದ್ದಾರೆ.