ಬೆಂಗಳೂರು : ಆ.22ರಂದು ನಿಧನರಾಗಿದ್ದ ಜ್ನಾನಪೀಠ ಪ್ರಶಸ್ತಿ ಪುರಸ್ಕೃತ ಸಾಹಿತಿ ಯು.ಆರ್ ಅನಂತ ಮೂರ್ತಿ ಅವರ ಅಂತ್ಯಕ್ರಿಯೆಯನ್ನು ಜ್ನಾನಭಾರತಿ ಆವರಣದಲ್ಲಿರುವ ಕಲಾಗ್ರಾಮದಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ನೆರವೇರಿಸಲಾಯಿತು.
ಮಾಧ್ವ ಬ್ರಾಹ್ಮಣ ಸಂಪ್ರದಾಯದಂತೆ ಸೂರ್ಯ ನಾರಾಯಣ ಶಾಸ್ತ್ರಿ ಅವರ ನೇತೃತ್ವದಲ್ಲಿ ವೇದಘೋಗಳನ್ನು ಪಠಿಸುವ ಮೂಲಕ ಅನಂತಮೂರ್ತಿ ಅವರ ಚಿತೆಗೆ ಪುತ್ರ ಶರತ್ ಅಗ್ನಿ ಸ್ಪರ್ಶ ಮಾಡಿದರು. ಧಾರ್ಮಿಕ ವಿಧಿವಿಧಾನಕ್ಕೂ ಮುನ್ನ ಅನಂತ ಮೂರ್ತಿಯವರಿಗೆ ಪೊಲೀಸ್ ಬ್ಯಾಂಡ್ ವತಿಯಿಂದ ಗೌರವ ವಂದನೆ ಸಲ್ಲಿಸಲಾಯಿತು. ಕುಶಾಲತೋಪು ಹಾರಿಸುವ ಮೂಲಕ ಪೊಲೀಸರು ಗೌರವ ವಂದನೆ ಸಲ್ಲಿಸಿದರು.
ಅಗಲಿದ ಚೇತನಕ್ಕೆ ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ, ಮುಖ್ಯಮಂತ್ರಿ ಸಿದ್ದರಾಮಯ್ಯ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವೆ ಉಮಾಶ್ರೀ, ಯು.ಟಿ ಖಾದರ್ ಸೇರಿದಂತೆ ರಾಜಕೀಯ ಗಣ್ಯರು ಅಂತಿಮ ನಮನ ಸಲ್ಲಿಸಿದರು. ಈ ಸಂದರ್ಭದಲ್ಲಿ 2 ನಿಮಿಷ ಮೌನಾಚರಣೆ ಮಾಡುವ ಮೂಲಕ ಅನಂತ ಮೂರ್ತಿ ಅವರ ಆತ್ಮಕ್ಕೆ ಶಾಂತಿ ಕೋರಲಾಯಿತು.
ಇತ್ತೀಚೆಗಷ್ಟೇ ನಿಧನರಾಗಿದ್ದ ರಾಷ್ಟ್ರಕವಿ ಜಿ.ಎಸ್ ಶಿವರುದ್ರಪ್ಪ ಅವರ ಅಂತ್ಯಕ್ರಿಯೆ ನಡೆದ ಕಲಾಗ್ರಾಮದಲ್ಲೇ ಜ್ನಾನಪೀಠ ಪ್ರಶಸ್ತಿ ಪುರಸ್ಕ್ಟುತ ಡಾ.ಯು.ಆರ್ ಅನಂತ ಮೂರ್ತಿ ಅವರ ಅಂತ್ಯಕ್ರಿಯೆಯನ್ನೂ ನಡೆಸಲಾಗಿದೆ.