ಬೆಂಗಳೂರು : 'ಜ್ನಾನಪೀಠ' ಪ್ರಶಸ್ತಿ ಪುರಸ್ಕೃತ ಸಾಹಿತಿ ಡಾ.ಯು.ಆರ್ ಅನಂತ ಮೂರ್ತಿ ಅವರ ಅಂತ್ಯಕ್ರಿಯೆಯನ್ನು ಬೆಂಗಳೂರು ವಿಶ್ವವಿದ್ಯಾಲಯದ ಜ್ನಾನಭಾರತಿ ಆವರಣದಲ್ಲಿರುವ ಕಲಾಗ್ರಾಮದಲ್ಲಿ ನಡೆಸಲು ನಿರ್ಧರಿಸಲಾಗಿದೆ.
ಸಕಲ ಸರ್ಕಾರಿ ಗೌರವಗಳೊಂದಿಗೆ ಅವರ ಪಾರ್ಥೀವ ಶರೀರಕ್ಕೆ ಅಂತಿಮ ನಮನ ಸಲ್ಲಿಸಲಾಗುತ್ತದೆ. ಅನಂತ ಮೂರ್ತಿ ಅವರ ಕುಟುಂಬಸ್ಥರು ಮತ್ತು ಅವರ ಆಪ್ತ ಸ್ನೇಹಿತರೊಂದಿಗೆ ಚರ್ಚಿಸಿದ ಬಳಿಕ ಬೆಂಗಳೂರಿನ ಕಲಾಗ್ರಾಮದಲ್ಲಿ ಹಿಂದೂ ಧರ್ಮದ ಅನ್ವಯ ಅಂತ್ಯಸಂಸ್ಕಾರ ನಡೆಸಲಾಗುತ್ತದೆ ಎಂದು ಎಂದು ಸಚಿವೆ ಉಮಾಶ್ರೀ ಅವರು ಹೇಳಿದ್ದಾರೆ.
ರಾಷ್ಟ್ರಕವಿ ಜಿ.ಎಸ್.ಶಿವರುದ್ರಪ್ಪ ಅವರ ಸಮಾಧಿ ಇರುವ ಬೆಂಗಳೂರಿನ ಕಲಾಗ್ರಾಮದಲ್ಲಿ ಸಂಜೆ 4 ಗಂಟೆಗೆ ಸಕಲ ಸರ್ಕಾರಿ ಗೌರವಗಳೊಂದಿಗೆ ಅನಂತ ಮೂರ್ತಿ ಅವರ ಅಂತಿಮ ವಿಧಿವಿಧಾನವನ್ನು ನಡೆಸಲಾಗುತ್ತದೆ. ಅವರ ಅಂತಿಮ ವಿಧಿವಾಧನದ ವೇಳೆ ಮುಸ್ಲಿಂ ಬಾಂಧವರ ಪ್ರಾರ್ಥನೆ ಮತ್ತು ಕ್ರಿಶ್ಚಿಯನ್ ಧರ್ಮೀಯರಿಂದ ವಿಶೇಷ ಪ್ರಾರ್ಥನೆ ಏರ್ಪಡಿಸಲಾಗಿದೆ ಎಂದು ಸಚಿವೆ ಉಮಾಶ್ರೀ ತಿಳಿಸಿದ್ದಾರೆ.
ಇದಕ್ಕೂ ಮೊದಲು ರವೀಂದ್ರ ಕಲಾಕ್ಷೇತ್ರದಲ್ಲಿ ಅನಂತ ಮೂರ್ತಿ ಅವರ ಅಂತಿಮ ದರ್ಶನಕ್ಕೆ ಅನುವು ಮಾಡಿಕೊಡಲಾಗಿದ್ದು, ಬೆಳಗ್ಗೆ 10ಗಂಟೆಗೆ ಅನಂತ ಮೂರ್ತಿ ಅವರ ಪಾರ್ಥೀವ ಶರೀರವನ್ನು ರವೀಂದ್ರ ಕಲಾಕ್ಷೇತ್ರದಲ್ಲಿ ಸಾರ್ವಜನಿಕ ದರ್ಶನಕ್ಕೆ ಇಡಲಾಗುತ್ತದೆ. ಮಧ್ಯಾಹ್ನ 3 ಗಂಟೆಯವರೆಗೂ ಸಾರ್ವಜನಿಕರರು ಅನಂತ ಮೂರ್ತಿ ಅವರ ಪಾರ್ಥೀವ ಶರೀರದ ದರ್ಶನ ಪಡೆಯಬಹುದು. ಸಂಜೆ 4 ಗಂಟೆಗೆ ಸಕಲ ಸರ್ಕಾರಿ ಗೌರವಗಳೊಂದಿಗೆ ಅನಂತ ಮೂರ್ತಿ ಅವರ ಪಾರ್ಥೀವ ಶರೀರದ ಅಂತಿಮ ವಿಧಿವಿಧಾನವನ್ನು ನೆರವೇರಿಸಲಾಗುತ್ತದೆ.