ಬೆಂಗಳೂರು : 2011ನೇ ಸಾಲಿನ ಕೆಪಿಎಸ್ ಸಿ ನೇಮಕಾತಿ ರದ್ದುಗೊಳಿಸಿರುವ ರಾಜ್ಯ ಸರ್ಕಾರದ ಆದೇಶಕ್ಕೆ ತಡೆ ನೀಡುವಂತೆ ಕೋರಿ ಅಭ್ಯರ್ಥಿಗಳು ಕರ್ನಾಟಕ ಆಡಳಿತಾತ್ಮಕ ನ್ಯಾಯಮಂಡಳಿ(ಕೆ.ಎ.ಟಿ)ಗೆ ಅರ್ಜಿ ಸಲ್ಲಿಸಿದ್ದಾರೆ.
ಕೆಪಿಎಸ್ ಸಿ ನೇಮಕಾತಿ ರದ್ದುಗೊಳಿಸಿ ಆದೇಶಹೊರಡಿಸಿರುವ ರಾಜ್ಯ ಸಚಿವ ಸಂಪುಟ ಸಭೆಯ ಕ್ರಮ ಖಂಡಿಸಿ, ಅಭ್ಯರ್ಥಿಗಳು 32ದಿನಗಳಿಂದ ನಡೆಸುತ್ತಿದ್ದ ಪ್ರತಿಭಟನೆಯನ್ನು ಆ.20ರಂದು ಬೃಹತ್ ಪ್ರತಿಭಟನಾ ರ್ಯಾಲಿ ನಡೆಸುವ ಮೂಲಕ ಕೈಬಿಟ್ಟು, ಕಾನೂನು ಹೋರಾಟಕ್ಕೆ ಮುಂದಾಗಿದ್ದರು.
ಈ ಹಿನ್ನಲೆಯಲ್ಲಿ ಸರ್ಕಾರದ ಆದೇಶ ರದ್ದುಗೊಳಿಸುವಂತೆ ಕೋರಿ ಅಭ್ಯರ್ಥಿಗಳು ಕರ್ನಾಟಕ ಆಡಳಿತಾತ್ಮಕ ನ್ಯಾಯಮಂಡಳಿ ಮೊರೆಹೋಗಿದ್ದಾರೆ. ಸರ್ಕಾರದ ನಿರ್ಧಾರ ರಾಜಕೀಯ ದುರುದ್ದೇಶದಿಂದ ಕೂಡಿದೆ. ಅಕ್ರಮಗಳು ನಡೆದಿರುವುದು ಸಾಬೀತಾಗಿಲ್ಲ, ಸಿಐಡಿ ವರದಿಯಲ್ಲಿ ಯಾವುದೇ ಅಭ್ಯರ್ಥಿಗಳ ವಿರುದ್ಧ ಆರೋಪ ಪಟ್ಟಿ ಸಲ್ಲಿಕೆಯಾಗಿಲ್ಲ ಎಂದು ಅಭ್ಯರ್ಥಿಗಳು ದೂರಿದ್ದಾರೆ.
ಅರ್ಹ, ಅನರ್ಹ ಅಭ್ಯರ್ಥಿಗಳನ್ನು ಗುರುತಿಸುವಲ್ಲಿ ಸರ್ಕಾರ ವಿಫಲವಾಗಿದ್ದು, ಊಹಾಪೋಹಗಳ ಆಧಾರದ ಮೇಲೆ ನೇಮಕಾತಿ ರದ್ದು ಮಾಡಿದೆ. ಇದರಿಂದಾಗಿ ಅಭ್ಯರ್ಥಿಗಳಿಗೆ ಮೂರು ವರ್ಷ ನಷ್ಟವಾಗಿದೆ ಎಂದು ಅರ್ಜಿಯಲ್ಲಿ ದೂರಿದ್ದಾರೆ.