ಬೆಂಗಳೂರು : ನಿವೃತ್ತ ಡಿಜಿಪಿ ಶಂಕರ್ ಬಿದರಿ ಆ.20ರಂದು ಬಿಜೆಪಿ ಸೇರ್ಪಡೆಗೊಳ್ಳಲಿದ್ದಾರೆ. ಲೋಕಸಭಾ ಚುನಾವಣೆಗೆ ಮೊದಲೇ ಶಂಕರ್ ಬಿದರಿ ಬಿಜೆಪಿ ಸೇರುವ ಬಗ್ಗೆ ಮಾತುಕತೆ ನಡೆದಿತ್ತಾದರೂ ಲೋಕಸಭಾ ಚುನಾವಣೆಯಲ್ಲಿ ತಮಗೆ ಟಿಕೆಟ್ ನೀಡಬೇಕು ಎಂಬ ಷರತ್ತು ಹಾಕಿದ್ದರಿಂದ ಮಾತುಕತೆಗೆ ಹಿನ್ನಡೆಯಾಗಿತ್ತು.
ಸಂಸದ ಗದ್ದಿಗೌಡ್ರ ಅವರಿಗೆ ಟಿಕೆಟ್ ನೀಡಲು ಬಿಜೆಪಿ ನಿರ್ಧರಿಸಿದ್ದರಿಂದ ಮುಂದಿನ ದಿನಗಳಲ್ಲಿ ಸೂಕ್ತ ಸ್ಥಾನಮಾನ ನೀಡುವ ಭರವಸೆ ನೀಡಿದ್ದರೂ ಬಗ್ಗದ ಶಂಕರ್ ಬಿದರಿ, ಜನಶಕ್ತಿ ಎಂಬ ತಮ್ಮದೇ ಪಕ್ಷ ಸ್ಥಾಪಿಸಿ ಚುನಾವಣೆಯಲ್ಲಿ ಸ್ಪರ್ಧಿಸಿ, ಠೇವಣಿ ಕಳೆದುಕೊಂಡರು. ಇದೀಗ ಮತ್ತೆ ಬಿಜೆಪಿಯತ್ತ ಮುಖಮಾಡಿರುವ ಬಿದರಿ ಪಕ್ಷ ಸೇರ್ಪಡೆಗೆ ನಿರ್ಧರಿಸಿದ್ದಾರೆ.
ಬೆಂಗಳೂರಿನ ಬಿಜೆಪಿ ಕಛೇರಿಯಲ್ಲಿ ರಾಜ್ಯಾಧ್ಯಕ್ಷ ಪ್ರಹ್ಲಾದ್ ಜೋಷಿ, ಬಾಗಲಕೋಟೆ ಸಂಸದ ಪಿ.ಸಿ.ಗದ್ದಿಗೌಡ್ರ, ಮಾಜಿ ಸಚಿವ ಗೋವಿಂದ ಕಾರಜೋಳ, ಹಲವು ನಾಯಕರ ಸಮ್ಮುಖದಲ್ಲಿ ಶಂಕರ್ ಬಿದರಿ ಬಿಜೆಪಿಗೆ ಸೇರ್ಪಡೆಗೊಳ್ಳಲಿದ್ದಾರೆ.
ನಾವು ಅಂದುಕೊಂಡ ಕೆಲಸವನ್ನು ಪ್ರಧಾನಿ ನರೇಂದ್ರ ಮೋದಿ ಮಾಡುತ್ತಿದ್ದಾರೆ. ಬಿಜೆಪಿ ಹಾಗೂ ನಮ್ಮ ವಿಚಾರಧಾರೆಯಲ್ಲಿ ವ್ಯತ್ಯಾಸವಿಲ್ಲ. ಹೀಗಾಗಿ ಮೋದಿ ಕೈ ಬಲಪಡಿಸಬೇಕು ಎಂಬ ಕಾರಣಕ್ಕಾಗಿ ಬಿಜೆಪಿ ಸೇರುತ್ತೇನೆ ಎಂದು ಬಿದರಿ ತಿಳಿಸಿದ್ದಾರೆ.
ಕಾಂಗ್ರೆಸ್ ಪಕ್ಷವನ್ನು ಸೇರ್ಪಡೆಗೊಳ್ಳುವ ಮೂಲಕ ರಾಜಕೀಯಕ್ಕೆ ಕಾಲಿಟ್ಟ ಶಂಕರ್ ಬಿದರಿ, ಭ್ರಮನಿರಸನಗೊಂಡು ಎಸ್.ಪಿ ಕದತಟ್ಟಿದರು. ಬಳಿಕ ಬಿಜೆಪಿಯತ್ತ ಮುಖಮಾಡಿ, ಬಾಗಲಕೋಟೆ ಲೋಕಸಭಾ ಕ್ಷೇತ್ರದ ಟಿಕೆಟ್ ಆಕಾಂಕ್ಷಿಯಾಗಿದ್ದ ಬಿದರಿಗೆ ಟಿಕೆಟ್ ನೀಡಲು ಬಿಜೆಪಿ ನಿರಾಕರಿಸಿತ್ತು. ಈ ಹಿನ್ನಲೆಯಲ್ಲಿ ಜನಶಕ್ತಿ ಎಂಬ ತಮ್ಮದೇ ಪಕ್ಷ ಸ್ಥಾಪಿಸಿದ್ದರು.