ನವದೆಹಲಿ : ತಲೆಗೆ ಪೆಟ್ಟು ಬಿದ್ದು ಶಸ್ತ್ರಚಿಕಿತ್ಸೆಗೊಳಗಾಗಿರುವ ಬಿಜೆಪಿ ಮಾಜಿ ಮುಖಂಡ ಜಸ್ವಂತ್ ಸಿಂಗ್ ಕೋಮಾ ಸ್ಥಿತಿಗೆ ಜಾರಿದ್ದಾರೆ. ಜಸ್ವಂತ್ ಸಿಂಗ್ ಆರೋಗ್ಯ ಸ್ಥಿತಿ ಮತ್ತಷ್ಟು ಚಿಂತಾಜನಕವಾಗಿದೆ.
ರಕ್ಷಣಾ ಸಚಿವಾಲಯ ಹೇಳಿಕೆ ಬಿಡುಗಡೆ ಮಾಡಿದ್ದು, ಮಾಜಿ ಕೇಂದ್ರ ಸಚಿರ ಆರೋಗ್ಯ ತೀರಾ ಗಂಭೀರವಾಗಿದೆ ಎಂದು ತಿಳಿಸಿದೆ. ಪ್ರಧಾನಿ ನರೇಂದ್ರ ಮೋದಿ, ಜಸ್ವಂತ್ ಸಿಂಗ್ ಆರೋಗ್ಯದ ಬಗ್ಗೆ ವಿಚಾರಿಸಿದ್ದಾರೆ. ಇದೇ ವೇಳೆ ಬಿಜೆಪಿ ಮುಖಂಡ ಎಲ್.ಕೆ ಅಡ್ವಾಣಿ, ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್, ಎ.ಐ.ಸಿ.ಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರೂ ಸಹ ಜಸ್ವಂತ್ ಸಿಂಗ್ ದಾಖಲಾಗಿರುವ ಆಸ್ಪತ್ರೆಗೆ ಭೇಟಿ ನೀಡಿದ್ದಾರೆ.
ಮಾಜಿ ಬಿಜೆಪಿ ನಾಯಕ ಜಸ್ವಂತ್ ಸಿಂಗ್ ಅವರ ತಲೆಗೆ ತೀವ್ರ ಪೆಟ್ಟು ಬಿದ್ದಿದ್ದರಿಂದ ಆರ್ಮಿ ರಿಸರ್ಚ್ ಅಂಡ್ ರೆಫೆರಲ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. 1999-2004ರ ಎನ್.ಡಿ.ಎ ಸರ್ಕಾರದ ಅವಧಿಯಲ್ಲಿ ರಕ್ಷಣಾ ಸಚಿವ, ವಿದೇಶಾಂಗ ಸಚಿವರಾಗಿ ಕಾರ್ಯನಿರ್ವಹಿಸಿದ್ದರು.
76 ವರ್ಷದ ಜಸ್ವಂತ್ ಸಿಂಗ್ ಗೆ 2014ರ ಲೋಕಸಭಾ ಚುನಾವಣೆಯಲ್ಲಿ ಬಾರ್ಮರ್ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಲು ಬಿಜೆಪಿ ಟಿಕೆಟ್ ನೀಡಲು ನಿರಾಕರಿಸಿತ್ತು. ಇದರಿಂದ ಅಸಮಾಧಾನಗೊಂಡ ಜಸ್ವಂತ್ ಸಿಂಗ್ ಬಿಜೆಪಿ ತೊರೆದು ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರು.