ತಿರುವನಂತಪುರಂ : ತಿರುವನಂತಪುರಂ-ಮಂಗಳೂರು ಎಕ್ಸ್ ಪ್ರೆಸ್ ರೈಲು ಮಂಗಳೂರಿಗೆ ತೆರಳುತ್ತಿದ್ದ ವೇಳೆ ಹಳಿತಪ್ಪಿದೆ. ಪರಿಣಾಮ 12 ಬೋಗಿಗಳು ಪಲ್ಟಿಯಾಗಿದ್ದು, ಅದೃಷ್ಟವಶಾತ್ ಯಾವುದೇ ಸಾವು-ನೋವು ಸಂಭವಿಸಿಲ್ಲ ಎಂದು ತಿಳಿದುಬಂದಿದೆ.
ಎರ್ನಾಕುಲಂ ಜಿಲ್ಲೆಯ ಅಲುವಾ ಮತ್ತು ಕರುಕುಟ್ಟಿ ನಿಲ್ದಾಣದಲ್ಲಿ ಬೆಳಗಿನ ಜಾವ 2.30ರ ಸುಮಾರಿಗೆ ಈ ಘಟನೆ ನಡೆದಿದೆ ಎಂದು ತಿಳಿದುಬಂದಿದೆ. ಘಟನೆ ವೇಳೆ ಯಾವುದೇ ಗಾಯಗಳಾಗಲಿ, ಪ್ರಾಣಾಪಾಯಗಳಾಗಲಿ ಸಂಭವಿಸಿಲ್ಲ ಎಂದು ದಕ್ಷಿಣ ರೈಲ್ವೆ ಇಲಾಖಾಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಪ್ರಯಾಣಿಕರಿಗೆ ತೊಂದರೆಯಾಗದಂತೆ ಅಧಿಕಾರಿಗಳು ಬಸ್ ವ್ಯವಸ್ಥೆಯನ್ನು ಕಲ್ಪಿಸಿದ್ದಾರೆ. ಘಟನೆ ಪರಿಣಾಮ ರೈಲ್ವೆ ಹಳಿಗಳು ಹಾಳಾಗಿದ್ದು, ದುರಸ್ತಿಗೊಳಿಸಲು ಸುಮಾರು 10 ಗಂಟೆಗೂ ಹೆಚ್ಚು ಕಾಲ ಬೇಕಾಗುತ್ತದೆ. ಹೀಗಾಗಿ, ಕೇರಳದ ಕೆಲ ರೈಲುಗಳ ಸಂಚಾರವನ್ನು ಸ್ಥಗಿತಗೊಳಿಸಲಾಗಿದ್ದು, ಇನ್ನೂ ಕೆಲ ರೈಲುಗಳ ಪಥ ಸಂಚಾರವನ್ನು ಬದಲಿಸಲಾಗಿದೆ.