ಶ್ರೀನಗರ : ದಕ್ಷಿಣ ಕಾಶ್ಮೀರದ ಹಂದ್ವಾರದ ಪಂಜ್ ಗಾಮ್ ನಲ್ಲಿ ಸೇನಾ ಪಡೆಗಳು ಬೆಳಗ್ಗೆ ನಡೆಸಿದ ಕಾರ್ಯಾಚರಣೆಯಲ್ಲಿ ಮೂವರು ಹಿಜ್ ಬುಲ್ ಮುಜಾಹಿದ್ದೀನ್ ಉಗ್ರರು ಸಾವನ್ನಪ್ಪಿದ್ದಾರೆ.
ಉಗ್ರರು ಅಡಗಿರುವ ನಿರ್ದಿಷ್ಟ ಮಾಹಿತಿ ಪಡೆದ ಭಾರತೀಯ ಯೋಧರು ಸ್ಥಳೀಯ ಪೊಲೀಸರೊಂದಿಗೆ ಸೇರಿ ನಡೆಸಿದ ಜಂಟಿ ಕಾರ್ಯಾಚರಣೆ ವೇಳೆ ಮೂವರು ಉಗ್ರರನ್ನು ಗುಂಡಿಟ್ಟು ಹತ್ಯೆ ಮಾಡಲಾಗಿದೆ ಎಂದು ಸೇನಾಧಿಕಾರಿಗಳು ತಿಳಿಸಿದ್ದಾರೆ.
ಕಾರ್ಯಾಚರಣೆ ವೇಳೆ ಉಗ್ರರು ಯೋಧರ ಮೇಲೆ ಗುಂಡು ಹಾರಿಸಿದ್ದು, ಇದಕ್ಕೆ ಪ್ರತಿಯಾಗಿ ಭಾರತೀಯ ಯೋಧರು ಗುಂಡು ಹಾರಿಸಿದ್ದಾರೆ. ಉಗ್ರರು ಹಾಗೂ ಯೋಧರ ನಡುವೆ ನಡೆದ ಗುಂಡಿನ ಚಕಮಕಿಯಲ್ಲಿ ಮೂವರು ಉಗ್ರರು ಸಾವನ್ನಪ್ಪಿದ್ದಾರೆ.
ಮೃತಪಟ್ಟ ಉಗ್ರರನ್ನು ಅಶ್ಫಾಕ್ ಅಹ್ಮದ್ ದಾರ್, ಇಶ್ಫಾಕ್ ಅಹ್ಮದ್ ಬಾಬಾ, ಹಸೇಬ್ ಅಹ್ಮದ್ ಎಂದು ಗುರುತಿಸಲಾಗಿದೆ.