ಇಸ್ಲಾಮಾಬಾದ್ : ರಾಯಭಾರಿಗಳನ್ನು ಹೊತ್ತೂಯ್ಯುತ್ತಿದ್ದ ಪಾಕಿಸ್ತಾನ ಸೇನೆಗೆ ಸೇರಿದ ಹೆಲಿಕಾಪ್ಟರೊಂದು ಪಾಕ್ ನ ಉತ್ತರ ದಿಕ್ಕಿನಲ್ಲಿರುವ ಗಿಲಿಟ್ ನ ಶಾಲೆಯೊಂದರ ಮೇಲೆ ಪತನವಾಗಿದೆ.
ಈ ದುರ್ಘಟನೆಯಲ್ಲಿ ನಾರ್ವೆ ಹಾಗೂ ಫಿಲಿಪ್ಪೀನ್ಸ್ ನ ರಾಯಭಾರಿಗಳು, ಮಲೇಷ್ಯಾ ಮತ್ತು ಇಂಡೋನೇಷ್ಯಾ ರಾಯಭಾರಿಗಳ ಪತ್ನಿಯಂದಿರು, ಹೆಲಿಕಾಪ್ಟರ್ ನ ಇಬ್ಬರು ಪೈಲಟ್ ಗಳು ಸೇರಿ ಒಟ್ಟು 7 ಮಂದಿ ಸಾವನ್ನಪ್ಪಿದ್ದಾರೆ.
ಕಾಪ್ಟರ್ ಪತನಗೊಂಡ ಬೆನ್ನಲ್ಲೇ ಹೇಳಿಕೆ ಬಿಡುಗಡೆ ಮಾಡಿರುವ ಪಾಕಿಸ್ತಾನದ ತಾಲಿಬಾನಿ ಉಗ್ರ ಸಂಘಟನೆ, ಹೆಲಿಕಾಪ್ಟರ್ ಅನ್ನು ಕ್ಷಿಪಣಿ ಮೂಲಕ ತಾನೆ ಹೊಡೆದು ರುಳಿಸಿರುವುದಾಗಿ ಹೇಳಿಕೊಂಡಿದೆ. ಅಲ್ಲದೆ ಪಾಕ್ ಪ್ರಧಾನಿ ನವಾಜ್ ಷರೀಫ್ ಅವರು ತನ್ನ ಗುರಿಯಾಗಿದ್ದರು ಎಂದು ತಿಳಿಸಿದೆ.
ಆದರೆ ಪಾಕಿಸ್ತಾನ ಸೇನೆ ಮಾತ್ರ, ಘಟನೆಯಲ್ಲಿ ಉಗ್ರರ ಕೈವಾಡವಿಲ್ಲ, ವಿಮಾನ ಇಳಿಯುವಾಗ ತಾಂತ್ರಿಕ ದೋಷದಿಂದ ಅಪಘಾತ ಸಂಭವಿಸಿದೆ ಎಂದು ಹೇಳಿದೆ.
ಮಕ್ಕಳು ಇದ್ದ ಶಾಲೆಯ ಮೇಲೆ ಹೆಲಿಕಾಪ್ಟರ್ ಬಿದ್ದಿದ್ದು, ಬೆಂಕಿ ಹೊತ್ತಿಕೊಂಡಿದೆ. ಹೀಗಾಗಿ ಸಾವಿನ ಸಂಖ್ಯೆ ಹೆಚ್ಚಾಗುವ ಸಂಭವವಿದೆ. ಈ ಘಟನೆಯಲ್ಲಿ ಪೋಲೆಂಡ್ ಹಾಗೂ ನೆದರ್ಲೆಂಡ್ ನ ರಾಯಭಾರಿಗಳು ಗಾಯಗೊಂಡಿದ್ದಾರೆ. ಗಿಲಿಟ್ ಗೆ ಪಾಕ್ ಪ್ರಧಾನಿ ಷರೀಫ್ ಕೂಡ ಪ್ರಯಾಣ ಬೆಳೆಸಿದ್ದರು. ಕಾಪ್ಟರ್ ಪತನಗೊಂಡ ವಿಷಯ ತಿಳಿಯುತ್ತಿದ್ದಂತೆ ಪ್ರಯಾಣ ರದ್ದುಗೊಳಿಸಿ ಇಸ್ಲಾಮಾಬಾದ್ ಗೆ ಮರಳಿದ್ದಾರೆ.
ವಿವಾದಿತ ಕಾಶ್ಮೀರದಲ್ಲಿರುವ ಗಿಲಿಟ್- ಬಾಲ್ಟಿಸ್ತಾನ್ ಭಾಗದಲ್ಲಿ ಎರಡು ಯೋಜನೆಗಳಿಗೆ ನವಾಜ್ ಷರೀಫ್ ಚಾಲನೆ ನೀಡುವ ಕಾರ್ಯಕ್ರಮ ನಿಗದಿಯಾಗಿತ್ತು. ಅದಕ್ಕಾಗಿ ಮೂರು ಹೆಲಿಕಾಪ್ಟರ್ ಗಳ ಮೂಲಕ ವಿದೇಶಿ ರಾಯಭಾರಿಗಳನ್ನು ಕರೆದೊಯ್ಯಲಾಗುತ್ತಿತ್ತು. ಆ ವೇಳೆ ಈ ದುರ್ಘಟನೆ ಸಂಭವಿಸಿದೆ.