ಶ್ರೀನಗರ : ಜಮ್ಮು-ಕಾಶ್ಮೀರದ ಸೋಪಿಯಾನ್ ಜಿಲ್ಲೆಯ ಅಶಿಪೋರಾ ಪ್ರದೇಶದಲ್ಲಿ ಉಗ್ರರು ಏಕಾಏಕಿ ಗುಂಡಿನ ದಾಳಿ ನಡೆಸಿದ ಪರಿಣಾಮ ಮೂವರು ಪೊಲೀಸರು ಸಾವನ್ನಪ್ಪಿರುವ ಘಟನೆ ನಡೆದಿದೆ.
ಕಳೆದ 24 ಗಂಟೆಗಳಲ್ಲಿ ಪೊಲೀಸರ ಮೇಲೆ ಉಗ್ರರು ನಡೆಸಿದ ಎರಡನೇ ದಾಳಿ ಇದಾಗಿದೆ.
ಜಮ್ಮು-ಕಾಶ್ಮೀರದ ಸೋಪಿಯಾನ್ ಜಿಲ್ಲೆಯಲ್ಲಿ ಪ್ರಕರಣವೊಂದರ ಬಗ್ಗೆ ತನಿಖೆ ನಡೆಸಲು ತೆರಳಿದ್ದ ಪೊಲೀಸರ ಮೇಲೆ ಉಗ್ರರು ದಾಳಿ ನಡೆಸಿದ್ದರು. ಇವರಲ್ಲಿ ಒಬ್ಬರು ಹೆಡ್ ಕಾನ್ ಸ್ಟೇಬಲ್, ಇಬ್ಬರು ಕಾನ್ ಸ್ಟೇಬಲ್ ಗಳು ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.
ಮೂವರು ಪೊಲೀಸ್ ತನಿಖೆಗೆ ತೆರಳಿದ್ದರಿಂದ ಯಾವುದೇ ಶಸ್ತ್ರಾಸ್ತ್ರ ಒಯ್ದಿರಲಿಲ್ಲ. ಈ ಸಂದರ್ಭದಲ್ಲಿ ಸಮಯಸಾಧಕ ಉಗ್ರರು ದಾಳಿ ನಡೆಸಿ ಹತ್ಯೆಗೈದಿದ್ದಾರೆ ಎಂದು ಹೇಳಿದ್ದಾರೆ.
ನಸುಕಿನ ವೇಳೆ ಬಾರಾಮುಲ್ಲಾ ಜಿಲ್ಲೆಯಲ್ಲಿ ಪೊಲೀಸ್ ಅಧಿಕಾರಿ ಮೇಲೆ ಉಗ್ರರು ಗುಂಡಿನ ದಾಳಿ ನಡೆಸಿದ್ದರು. ಆ ಘಟನೆ ನಡೆದ ಕೆಲವು ಘಂಟೆಗಳ ನಂತರ ದಕ್ಷಿಣ ಕಾಶ್ಮೀರದಲ್ಲಿ ಉಗ್ರರು ಮತ್ತೆ ಅಟ್ಟಹಾಸ ಮುಂದುವರಿಸಿದ್ದಾರೆ.