ಬೆಂಗಳೂರು : 'ಡಿ.ಕೆ ರವಿ' ಅವರದ್ದು ಆತ್ಮಹತ್ಯೆ ಎಂದು ರಾಜ್ಯ ಸರ್ಕಾರ ಬಲವಾಗಿ ವಾದಿಸುತ್ತಿರಬೇಕಾದರೆ, ಅನುಮಾನಾಸ್ಪದವಾಗಿ ಸಾವನ್ನಪ್ಪಿದ ಐ.ಎ.ಎಸ್ ಅಧಿಕಾರಿ ಡಿ.ಕೆ ರವಿ ಅವರ ಮೃತದೇಹದ ಮಾದರಿಗಳು ಇನ್ನೂ ಫೋರೆನ್ಸಿಕ್ ಲ್ಯಾಬ್ ತಲುಪಿಲ್ಲ ಎಂಬ ವಿಷಯ ಬಹಿರಂಗವಾಗಿದೆ.
ಮಾ.17ರಂದೇ ಡಿ.ಕೆ ರವಿ ಅವರ ಮೃತದೇಹದ ಮರಣೋತ್ತರ ಪರೀಕ್ಷೆ ನಡೆಸಿ ಮೃತದೇಹದ ಮಾದರಿಗಳನ್ನು ಸಂಗ್ರಹಿಸಲಾಗಿತ್ತು. ಎರಡು ದಿನಗಳಾದರೂ ಅವು ನಮ್ಮ ಕೈಸೇರಿಲ್ಲ. ಇನ್ನು ಒಂದು ವಾರದೊಳಗೆ ವರದಿ ನೀಡಲು ನಮಗೆ ಸೂಚಿಸಲಾಗಿದೆ. ಆದರೆ ಮಾದರಿಗಳೇ ತಲುಪದೇ ಇದ್ದಲ್ಲಿ ವರದಿ ನೀಡಲು ಹೇಗೆ ತಾನೇ ಸಾಧ್ಯ ಎಂದು ಫೋರೆನ್ಸಿಕ್ ತಜ್ನರು ಹೇಳಿದ್ದಾರೆ.
ಐ.ಎ.ಎಸ್ ಅಧಿಕಾರಿ ರವಿ ಅವರು ಸಾವನ್ನಪ್ಪಿ ನಾಲ್ಕು ದಿನಗಳು ಕಳೆದಿವೆ. ರವಿಯವರ ಮೃತದೇಹವನ್ನು ಸಂಬಂಧಿಕರ ವಶಕ್ಕೆ ನೀಡುವ ಮುನ್ನವೇ ಅವರ ದೇಹದ ಒಳಭಾಗದ ಅಂಗಗಳು (ಕರುಳು ಇತ್ಯಾದಿ) ಹಾಗೂ ದ್ರವಗಳನ್ನು ಸಂಗ್ರಹಿಸಿಕೊಳ್ಳಲಾಗಿದ್ದರೂ ಇನ್ನೂ ಕೂಡ ಅವು ಫೋರೆನ್ಸಿಕ್ (ಎಫ್.ಎಸ್.ಎಲ್) ತಜ್ನರ ಕೈಗೆ ತಲುಪಿಲ್ಲ.
ಈ ವಸ್ತುಗಳ ಪರೀಕ್ಷೆ ನಡೆಯದೆ ಮೃತದೇಹದ ಪರೀಕ್ಷೆಯ ವರದಿ ಪೂರ್ಣವಾಗುವುದಿಲ್ಲ. ಫೋರೆನ್ಸಿಕ್ ವರದಿ ಬಂದರೆ ರವಿ ಸಾವಿನ ನಿಜವಾದ ಕಾರಣ ಬಯಲಾಗಲಿದೆ. ಆದರೆ ಪರೀಕ್ಷೆಗೆ ಅಗತ್ಯವಾದ ವಸ್ತುಗಳೇ ಇನ್ನೂ ತಲುಪಬೇಕಾದವರಿಗೆ ತಲುಪಿಲ್ಲ.