ಪಾಟ್ನಾ : ಇತ್ತೀಚೆಗಷ್ಟೆ ಪಾಕಿಸ್ತಾನದ ವಿರುದ್ಧ ಮೌಲ್ವಿಯೊಬ್ಬರು ತೀವ್ರ ವಾಗ್ದಾಳಿ ನಡೆಸಿ ಭಾರತ ಸರ್ಕಾರ ಪಾಕ್ ನಲ್ಲಿರುವ ಭಯೋತ್ಪಾದಕರ ನೆಲೆಯನ್ನು ಧ್ವಂಸಗೊಳಿಸಬೇಕೆಂದು ಹೇಳಿಕೆ ನೀಡಿದ್ದರು. ಇಂಥದ್ದೇ ಮತ್ತೊಂದು ಅಚ್ಚರಿಯ ಘಟನೆ ಬಿಹಾರದಲ್ಲಿ ನಡೆದಿದೆ.
ಪಾಟ್ನಾದಲ್ಲಿ ಇಸ್ಲಾಮಿಕ್ ಸಂಸ್ಥೆಯೊಂದನ್ನು ನಡೆಸುತ್ತಿರುವವರಿಗೆ ಪಾಕಿಸ್ತಾನದ ಗುಪ್ತಚರ ಇಲಾಖೆ ಐ.ಎಸ್.ಐ ನೇಮಕಾತಿ ಪತ್ರವನ್ನು ಇ-ಮೇಲ್ ಮೂಲಕ ಕಳಿಸಿತ್ತು. ಇದರಿಂದ ತೀವ್ರ ಆಕ್ರೋಶಗೊಂಡ ರಿಜ್ವಾನ್ ಅಹಮದ್, ಪಾಟ್ನಾದ ಪೊಲೀಸ್ ಠಾಣೆಯಲ್ಲಿ ಐ.ಎಸ್.ಐ ವಿರುದ್ಧ ದೂರು ದಾಖಲಿಸಿದ್ದಾರೆ.
"ತಮ್ಮನ್ನು ಐ.ಎಸ್.ಐ ತಾತ್ಕಲಿಕವಾಗಿ ನೇಮಿಸಿಕೊಳ್ಳುತ್ತಿದೆ. ನಿಬಂಧನೆಗಳನ್ನು ಪೂರ್ಣಗೊಳಿಸಿದಲ್ಲಿ ಪೂರ್ಣಾವಧಿ ಕೆಲಸಕ್ಕೆ ನೇಮಿಸಿಕೊಳ್ಳಲಿದ್ದೇವೆ. ಈ ಮೇಲ್ ನ್ನು ಯಾರೊಂದಿಗೂ ಹಂಚಿಕೊಳ್ಳಬಾರದು ಹಾಗೂ ಇದನ್ನು ಗೌಪ್ಯವಾಗಿ ಕಾಪಾಡಿಕೊಳ್ಳಬೇಕು" ಎಂದು ಐ.ಎಸ್.ಐ ನಿರ್ದೇಶಕರಿಂದ ರಿಜ್ವಾನ್ ಗೆ ಇ-ಮೇಲ್ ಬಂದಿದೆ. ಇ-ಮೇಲ್ ನೋಡಿದ ಕೂಡಲೇ ಪೊಲೀಸ್ ಠಾಣೆಗೆ ಧಾವಿಸಿರುವ ಇಸ್ಲಾಮಿಕ್ ಸಂಸ್ಥೆಯ ಮಾಲಿಕ ಐ.ಎಸ್.ಐ ವಿರುದ್ಧ ದೂರು ದಾಖಲಿಸಿದ್ದಾರೆ.
ರಿಜ್ವಾನ್, ಬಿಹಾರದ ಜಮತ್-ಎ- ಇಸ್ಲಾಮಿ ಸಂಘಟನೆಯ ಮುಖ್ಯಸ್ಥರಾಗಿದ್ದು, ತಮಗೆ ಐ.ಎಸ್.ಐ ಬಗ್ಗೆ ಯಾವುದೇ ಮಾಹಿತಿ ಇಲ್ಲ ಎಂದು ಹೇಳಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಅಪರಾಧ ವಿಭಾಗದ ಪೊಲೀಸರು,ಪ್ರಕರಣವನ್ನು ಸೈಬರ್ ಕ್ರೈಮ್ ವಿಭಾಗಕ್ಕೆ ವರ್ಗಾಯಿಸಿದ್ದಾರೆ.