ಫೈಲ್ ಫೋಟೊ
ಉಡುಪಿ ಜಿಲ್ಲೆಯ ಪ್ರಸಿದ್ಧ ಮೀನುಗಾರಿಕಾ ಬಂದರು ಪ್ರದೇಶ ಗಂಗೊಳ್ಳಿ ಸಂಪೂರ್ಣವಾಗಿ ನಿರ್ಲಕ್ಷಿಸಲ್ಪಡುತ್ತಿದ್ದು, ಅದೆಷ್ಟೋ ಸರಕಾರಗಳು ಬಂದು ಹೋದರೂ, ಮಂತ್ರಿಗಳು, ಜನಪ್ರತಿನಿಧಿಗಳು ಭೇಟಿ ನೀಡಿದರೂ, ಮೀನುಗಾರರ ದಶಕದ ಕನಸು ಕನಸಾಗಿಯೇ ಉಳಿದಿದೆ. ಸರಕಾರ, ಸಚಿವರು ನೀಡಿದ ಆಶ್ವಾಸನೆಗಳು ಕೇವಲ ಪ್ರಚಾರಕ್ಕಾಗಿ ಮಾತ್ರ ಎಂಬುದು ಗಂಗೊಳ್ಳಿ ಬಂದರಿನ ಸ್ಥಿತಿ ನೋಡಿದರೆ ಮನದಟ್ಟಾಗುತ್ತದೆ.
ಉಡುಪಿ ಜಿಲ್ಲೆಯ ಪ್ರಮುಖ ಮೀನುಗಾರಿಕಾ ಬಂದರು ಪ್ರದೇಶವಾಗಿರುವ ಗಂಗೊಳ್ಳಿಯಲ್ಲಿ ಕೇಂದ್ರ ಹಾಗೂ ರಾಜ್ಯ ಸರಕಾರಗಳ ಜಂಟಿ ಸಹಯೋಗದೊಂದಿಗೆ ಸುಮಾರು 8.32ಕೋಟಿ ರೂಪಾಯಿ ವೆಚ್ಚದಲ್ಲಿ ಕಿರು ಮೀನುಗಾರಿಕಾ ಬಂದರು ನಿರ್ಮಾಣಗೊಂಡಿದೆ. ಇದರೊಂದಿಗೆ ಬಂದರು ಪ್ರದೇಶದಲ್ಲಿ ಶೌಚಾಲಯ, ಶೆಡ್‌ಗಳು, ಇಲಾಖಾ ಕಛೇರಿ ಸಂಕೀರ್ಣಗಳು ತಲೆ ಎತ್ತಿ ನಿಂತಿವೆ. ಬಂದರು ಆವರಣದಲ್ಲಿ ಐಸ್ ಪ್ಲಾಂಟ್ ಹಾಗೂ ಡೀಸೆಲ್ ಬಂಕ್ ಕೂಡ ನಿರ್ಮಾಣಗೊಂಡಿದೆ. ಕುಸಿತ ಕಂಡಿರುವ ಹಳೆ ಜೆಟ್ಟಿ ಸುಮಾರು 3ಕೋಟಿ ರೂ. ವೆಚ್ಚದಲ್ಲಿ ನೂತನವಾಗಿ ನಿರ್ಮಿಸಲಾಗುತ್ತಿದೆ. ಅಲ್ಲದೆ, ಮೀನುಗಾರರ ಬಹುದಿನಗಳ ಬೇಡಿಕೆಯಾಗಿರುವ ಬ್ರೇಕ್ ವಾಟರ್ ಕಾಮಗಾರಿ ಸುಮಾರು 3ಕೋಟಿ ರೂ. ವೆಚ್ಚದಲ್ಲಿ ಅನುಷ್ಠಾನಗೊಳ್ಳುತ್ತಿದೆ. ಇಷ್ಟಾಗಿಯೂ ಗಂಗೊಳ್ಳಿ ಬಂದರು ದಿನೆ ದಿನೆ ಜೀವ ಕಳೆದುಕೊಳ್ಳುತ್ತಿರುವುದು ಮೀನುಗಾರರನ್ನು ಚಿಂತೆಗೀಡು ಮಾಡಿದೆ.
ಗಂಗೊಳ್ಳಿ ಬಂದರಿನ ಪ್ರಮುಖ ಸಮಸ್ಯೆ ಎಂದರೆ ಅಳಿವೆ ಹಾಗೂ ಜೆಟ್ಟಿ ಪ್ರದೇಶದಲ್ಲಿ ತುಂಬಿಕೊಂಡಿರುವ ಹೂಳು. ಅಳಿವೆಯಲ್ಲಿ ಹೂಳು ತುಂಬಿಕೊಂಡಿರುವುದರಿಂದ ಪ್ರತಿವರ್ಷ ಅನೇಕ ದೋಣಿಗಳು ಅಪಘಾತಕ್ಕೀಡಾಗುತ್ತಿವೆ. ನೂತನವಾಗಿ ನಿರ್ಮಾಣಗೊಂಡಿರುವ ಸುಮಾರು 450 ಮೀಟರ್ ಉದ್ದದ ಜೆಟ್ಟಿ ಪ್ರದೇಶದಲ್ಲಿ ಹೂಳು ತುಂಬಿರುವುದರಿಂದ ಬೋಟುಗಳು ನಿಲ್ಲಲು ಸಾಧ್ಯವಾಗುತ್ತಿಲ್ಲ. ಇದು ಪ್ರತಿವರ್ಷ ಅದೇ ರಾಗ ಅದೇ ಹಾಡು ಎಂಬಂತಾಗಿದೆ ಇಲ್ಲಿನ ಮೀನುಗಾರರ ಸಮಸ್ಯೆ. ಒಂದೆಡೆ ಮತ್ಸ್ಯಕ್ಷಾಮದಿಂದ ಮೀನುಗಾರರು ತತ್ತರಿಸಿದ್ದರೆ, ಇನ್ನೊಂದೆಡೆ ಗಂಗೊಳ್ಳಿ ಬಂದರಿನ ಸಮಸ್ಯೆ ಮೀನುಗಾರರ ತಲೆನೋವಿಗೆ ಕಾರಣವಾಗಿದೆ.
ಇದಕ್ಕೆ ಮುಖ್ಯ ಕಾರಣ, ಯೋಜನೆಗಳ ಅನುಷ್ಠಾನದಲ್ಲಾಗುತ್ತಿರುವ ವಿಳಂಬ. ಸರಕಾರ ಕೋಟ್ಯಾಂತರ ರೂ. ಅನುದಾನವನ್ನು ಬಂದರು ಅಭಿವೃದ್ಧಿಗೆ ಬಿಡುಗಡೆ ಮಾಡುತ್ತಿದ್ದರೂ ಇದರ ಸಮರ್ಪಕ ಬಳಕೆಯಾಗುತ್ತಿಲ್ಲ ಎಂಬ ದೂರು ಸಾರ್ವತ್ರಿಕವಾಗಿ ಕೇಳಿ ಬರುತ್ತಿದೆ.
ಅಧಿಕಾರಿಗಳು ಬಂದರಿನಲ್ಲಿ ಅನುಷ್ಠಾನಗೊಳ್ಳಬೇಕಿರುವ ಯೋಜನೆಗಳ ಬಗ್ಗೆ ಕಿಂಚಿತ್ತೂ ಆಸಕ್ತಿ ವಹಿಸದಿರುವುದು ಯೋಜನೆಗಳು ಹಿನ್ನಡೆ ಕಾಣಲು, ಹಳ್ಳ ಹಿಡಿಯಲು ಕಾರಣವಾಗುತ್ತಿದೆ. ಕಳೆದ ಸುಮಾರು 2ವರ್ಷಗಳ ಹಿಂದೆ ಆರಂಭಗೊಂಡಿರುವ ಬ್ರೇಕ್ ವಾಟರ್ ಯೋಜನೆ ಶೇ.2೦ರಷ್ಟು ಕೂಡ ಪೂರ್ಣಗೊಂಡಿಲ್ಲ. ಅಧಿಕಾರಿಗಳು ಕಾಲ ಕಾಲಕ್ಕೆ ಯೋಜನಾ ಸ್ಥಳಕ್ಕೆ ಭೇಟಿ ನೀಡುವ ಗೋಜಿಗೂ ಹೋಗದಿರುವುದು, ಬಂದರಿನ ಬಗ್ಗೆ ನಿರಾಸಕ್ತಿ ವಹಿಸುತ್ತಿರುವುದು ಬಂದರು ಅಭಿವೃದ್ಧಿಯಲ್ಲಿ ಹಿನ್ನಡೆ ಕಾಣಲು ಕಾರಣ ಎನ್ನಲಾಗುತ್ತಿದೆ.
ಇನ್ನೊಂದೆಡೆ ನಮ್ಮ ಜನಪ್ರತಿನಿಧಿಗಳು ಇದಕ್ಕೆ ಪರೋಕ್ಷ ಕಾರಣವಾಗಿದ್ದಾರೆ. ಸರಕಾರದಿಂದ ಹಣ ಬಿಡುಗಡೆ ಮಾಡಿ ಕೇವಲ ಪ್ರಚಾರಕ್ಕೆ ಮಾತ್ರ ಸೀಮಿತವಾಗಿರುವ ಜನಪ್ರತಿಧಿನಿಗಳು, ಸರಕಾರ ಬಿಡುಗಡೆ ಮಾಡುತ್ತಿರುವ ಅನುದಾನದ ಸಮರ್ಪಕ ಬಳಕೆ ಬಗ್ಗೆ ಮತ್ತು ಯೋಜನೆಯ ಸಮರ್ಪಕ ಅನುಷ್ಠಾನದ ಬಗ್ಗೆ ಕಿಂಚಿತ್ತೂ ಕಾಳಜಿ ವಹಿಸುತ್ತಿಲ್ಲ. ಜನಪ್ರತಿನಿಗಳ ಈ ಅಸಡ್ಡೆ ನೀತಿ ಅಧಿಕಾರಿಗಳಿಗೆ ಹಾಗೂ ಗುತ್ತಿಗೆದಾರರಿಗೆ ವರವಾಗಿ ಪರಿಣಮಿಸಿದೆ. ಜನಪ್ರತಿನಿಧಿಗಳ ನಿರ್ಲಕ್ಷ್ಯದ ಸಂಪೂರ್ಣ ಲಾಭವನ್ನು ಪಡೆದುಕೊಳ್ಳುತ್ತಿರುವ ಅಧಿಕಾರಿ ವರ್ಗ ಮೀನುಗಾರರ ಬೆನ್ನಿಗೆ ಚೂರಿ ಹಾಕುವ ಕೆಲಸ ಮಾಡುತ್ತಿದೆ.
ಕಳೆದ ನಾಲ್ಕೈದು ವರ್ಷಗಳಿಂದ ಅನೇಕ ಸಚಿವರು, ಜನಪ್ರತಿನಿಧಿಗಳು, ಶಾಸಕರು ಬಂದರಿಗೆ ಭೇಟಿ ನೀಡಿ ಪರಿಸ್ಥಿತಿಯನ್ನು ಕಣ್ಣಾರೆ ಕಂಡು ಹೋಗಿದ್ದರೂ ಏನೂ ಪ್ರಯೋಜನವಾಗಲಿಲ್ಲ. ಮೀನುಗಾರರ ಸಮಸ್ಯೆಗಳನ್ನು ಹತ್ತಿರದಿಂದ ತಿಳಿದಿರುವ ಈಗಿನ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವರು ರಾಜ್ಯದ ಎಲ್ಲ ಬಂದರು ಪ್ರದೇಶಗಳಿಗೆ ಭೇಟಿ ನೀಡಿದ್ದರೂ, ಗಂಗೊಳ್ಳಿ ಬಂದರಿಗೆ ಮಾತ್ರ ಈತನಕ ಭೇಟಿ ನೀಡದಿರುವುದು, ಅಭಿವೃದ್ಧಿ ಪರಿಶೀಲನೆ ನಡೆಸದಿರುವುದು ಹಲವು ಅನುಮಾನ, ಸಂಶಯಗಳಿಗೆ ಕಾರಣವಾಗಿದೆ.
ಜಿಲ್ಲಾ ಮಟ್ಟದಲ್ಲಿ ಅಧಿಕಾರಿಗಳು ನೀಡಿದ ವರದಿಯನ್ನಾಧರಿಸಿ ಹೇಳಿಕೆ ನೀಡುವ ಬದಲು ಬಂದರು ಪ್ರದೇಶದಲ್ಲಿ ಆಗುತ್ತಿರುವ ಕಾಮಗಾರಿಗಳನ್ನು ವೀಕ್ಷಿಸಿ, ಇಲ್ಲಿನ ಮೀನುಗಾರರು ಎದುರಿಸುತ್ತರಿವ ಸಮಸ್ಯೆಗಳನ್ನು ಅರಿಯುವ ಕಾರ್ಯ ಮಾಡಬೇಕೆನ್ನುವುದು ಈ ಭಾಗದ ಮೀನುಗಾರರ ಬೇಡಿಕೆಯಾಗಿದ್ದು, ಗಂಗೊಳ್ಳಿ ಬಂದರನ್ನು ಸರಕಾರ ಕಡೆಗಣಿಸುತ್ತಿರುವುದಕ್ಕೆ ಇದೊಂದು ಸ್ಪಷ್ಟ ಉದಾಹರಣೆಯಾಗಿದೆ ಎನ್ನುತ್ತಾರೆ ಮೀನುಗಾರರು.
ಅಳಿವೆ ಪ್ರದೇಶದ ಡ್ರೆಜ್ಜಿಂಗ್ ಮತ್ತು ಬ್ರೇಕ್ ವಾಟರ್‌ನ ಕಾಮಗಾರಿ ನಿರೀಕ್ಷಿತ ಮಟ್ಟದಲ್ಲಿ ಪ್ರಗತಿ ಕಂಡರೆ, ಸರಕಾರದ, ಜನಪ್ರತಿನಿಧಿಗಳ ಸಹಕಾರ ದೊರೆತಲ್ಲಿ ಗಂಗೊಳ್ಳಿ ಬಂದರು ಸರ್ವಋತು ಬಂದರಾಗಿ ಮಾರ್ಪಾಡು ಹೊಂದಲಿದೆ. ಸರ್ವಋತು ಬಂದರಾಗುವ ಎಲ್ಲ ಅರ್ಹತೆಗಳನ್ನು ಪಡೆದಿರುವ ಗಂಗೊಳ್ಳಿಗೆ ಸರಕಾರ, ಸಚಿವರ, ಸ್ಥಳೀಯ ಶಾಸಕರ, ಸಂಸದರ ಬೆಂಬಲ ದೊರೆಯಬೇಕಿದೆ.
ಇಲ್ಲಿಯವರೆಗೆ ಈ ಭಾಗದ ಮೀನುಗಾರರ ಸಮಸ್ಯೆಗಳಿಗೆ ಸ್ಪಂದಿಸಿರುವ ಸರಕಾರ ಗಂಗೊಳ್ಳಿ ಬಂದರಿನ ಬಗ್ಗೆ ವಿಳಂಬನೀತಿ ಅನುಸರಿಸದು ಎಂಬ ಆಶಾಭಾವ ಈ ಭಾಗದ ಮೀನುಗಾರರಲ್ಲಿದೆ. ಈ ಬಾರಿಯ ಬಜೆಟ್‌ನಲ್ಲಿ ಗಂಗೊಳ್ಳಿ ಮೀನುಗಾರಿಕಾ ಬಂದರಿನ ಅಭಿವೃದ್ಧಿ ಬಗ್ಗೆ ಅನುದಾನ ಘೋಷಣೆ ಮಾಡಬೇಕು ಎಂಬ ಸ್ಥಳೀಯ ಮೀನುಗಾರರ ಬೇಡಿಕೆಗೆ ಸರಕಾರ ಸ್ಪಂದಿಸಲಿದಯೇ ಎಂಬುದನ್ನು ಕಾದು ನೋಡಬೇಕಿದೆ.
ಬೆಳಗಾವಿ ಅಧಿವೇಶನ ಮುಗಿದ ಬಳಿಕ ಇಲಾಖೆಯ ಉನ್ನತ ಅಧಿಕಾರಿಗಳೊಂದಿಗೆ ಗಂಗೊಳ್ಳಿ ಬಂದರಿಗೆ ಭೇಟಿ ನೀಡಿ ಪ್ರಗತಿ ಪರಿಶೀಲನೆ ನಡೆಸಲಾಗುತ್ತದೆ ಎಂದು ಕಳೆದ ಸುಮಾರು ಒಂದೂವರೆ ತಿಂಗಳಿನ ಹಿಂದೆ ಗಂಗೊಳ್ಳಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಭರವಸೆ ನೀಡಿದ್ದ ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿಯವರು ಬಳಿಕ ಗಂಗೊಳ್ಳಿಯತ್ತ ಸುಳಿದಿಲ್ಲ. ಆದರೆ ಈಗಲೂ ಕಾಲ ಮಿಂಚಿಲ್ಲ.
Author : ಚಂದ್ರಲೇಖಾ ರಾಕೇಶ್