Untitled Document
Sign Up | Login    
ಹಿತ್ತಲ ಗಿಡವೇ ಮದ್ದೆನ್ನುವ ನೇಚರ್ ಡಾಕ್ಟರ್..


ಹಿತ್ತಲ ಗಿಡ ಮದ್ದಲ್ಲ ಎನ್ನುವ ಮರ್ಜಿಯಲ್ಲೇ ಬಳಲುತ್ತಾ ಸಣ್ಣ ಶೀತ ಶುರುವಾದರೂ ಕ್ಲಿನಿಕ್ಗಳನ್ನೇ ಮುದ್ದು ಮಾಡೋ ಮಂದಿ ಜಾಸ್ತಿ ಈಗ. ಹಾಗೆ ಕ್ಲಿನಿಕ್ಗೆ ಜೋತು ಬಿದ್ದಾಗ ವೈದ್ಯರಿಗೆ ನೂರಿನ್ನೂರು ಪೀಕದೇ ಆಚೆ ಬರಲಾಗದು. ಆದರೆ ಇಲ್ಲೊಬ್ಬರು ಸಂಚಾರಿ ವೈದ್ಯರಿದ್ದಾರೆ. ಇಂತಹ ನಾಟಿವೈದ್ಯರು ನಿಮ್ಮೂರಲ್ಲೂ ಇರಲಿಕ್ಕೆ ಸಾಕು.. ಸದ್ಯಕ್ಕೆ ಉಡುಪಿ ಜಿಲ್ಲೆಯ ದಿವಾಕರರ ಕತೆ ಕೇಳೋಣ. ಹಿತ್ತಲ ಗಿಡವೇ ಮುದ್ದು. ಎಲ್ಲದ್ದಕ್ಕೂ ಅದೇ ಮದ್ದು ಎನ್ನುತ್ತಾ ಪ್ರಕೃತಿಯ ಒಡಲಲ್ಲೇ ಮದ್ದು ಹುಡುಕುವ ಈ ನೇಚರ್ ಡಾಕ್ಟರ್ ಕಾರ್ಕಳದ ದಿವಾಕರ್ ಕುಮಾರ್. ಸಣ್ಣ ಪುಟ್ಟ ಖಾಯಿಲೆಗಳಿಗೆ ರಾಮಬಾಣ ಬಿಡುವ ಇವರಲ್ಲಿ ಬಹುತೇಕ ಎಲ್ಲಾ ಖಾಯಿಲೆಗಳಿಗೂ ಮದ್ದಿದೆ.

ನಮಗೆ ತೋಟದಲ್ಲಿ ಹುಲುಸಾಗಿ ಬೆಳೆದ ಬೇರೋ? ಯಾವುದೋ ಮೂಲೆಯಲ್ಲಿರೋ ತೊಗಟೆನೋ ಕಂಡರೆ ಒಲೆಗೆ ಹಾಕುವ ಮನಸ್ಸಾಗುತ್ತದೆ, ಆದರೆ ಇವರು ಹಾಗಲ್ಲ. ಆ ಬೇರು ತೊಗಟೆಗಳ ಮಾಯೆಯನ್ನರಿತು ಅದರ ಕಣಕಣದಲ್ಲೂ ಮದ್ದಿನ ಸತ್ವವನ್ನೇ ಹುಡುಕಿ ಅದನ್ನು ಸೇವಾ ಮನೋಭಾವದಿಂದ ನೀಡುವ ವಿಶೇಷ ಅಭಿರುಚಿಯುಳ್ಳವರು. ಹಾಗಾಗಿ ಇಲ್ಲಿನವರ ಪಾಲಿಗೆ ಇವರು, ಆಯುರ್ವೆದಿಕ್ ಡಾಕ್ಟರ್. ಹಸಿರ ಸಿರಿಯಿಂದಲೇ ರೋಗ ಉಚ್ಚಾಟಿಸಿಬಿಡುವ ಹಸಿರ ಹರಿಕಾರ. ಹಾಗಂತ ಇವರೇನೂ ಮೆಡಿಕಲ್ಲೋ, ಆಯುರ್ವೇದಿಕ್ ಕೋರ್ಸನ್ನೋ ಕಲಿತ ನುರಿತ ಮನುಷ್ಯರು ಅಂತ ನೀವಂದುಕೊಂಡರೆ ಆ ಊಹೆ ತಪ್ಪು.. ಜನಜಂಗುಣಿಯ ನಡುವೆ ಕ್ಲಿನಿಕ್ ಇಟ್ಟುಕೊಂಡೂ ಕೂತಿಲ್ಲ. ಮನೆತನದಲ್ಲಿ ಅನೂಚಾನವಾಗಿ ನಡೆದುಕೊಂಡು ಬಂದ, ಇಂತಹ ಹಿತ್ತಿಲ ಗಿಡಗಳ ಅನುಭವದ ಕೋರ್ಸೇ ಇವರಿಗೆ ರೋಗಗಳನ್ನು ಉಚ್ಚಾಟಿಸಲು ಸಿಕ್ಕ ಮಾಯಾದಂಡ.

ಅಂತಹ ಅನುಭವದ ಮಾಯಾದಂಡದಿಂದಲೇ ಇಲ್ಲಿನ ಹಲವರಿಗೆ ಮದ್ದು ಕೊಡುತ್ತಲೇ ಬಂದ ಇವರು ಸಾಮಾನ್ಯ ಜ್ವರ, ಶೀತ, ಉಳುಕು, ವಾತರೋಗ, ಅಲರ್ಜಿ, ಮೈ ಕೈ ಬೇನೆ, ಮೂಲವ್ಯಾಧಿ, ಉಬ್ಬಸ ಇತ್ಯಾದಿ ರೋಗಗಳಿಗೆಲ್ಲಾ, ಗಿಡ ಮೂಲಿಕೆಗಳ ನಾರು, ಬೇರು, ತೊಗಟೆಗಳಿಂದ ಪರಿಪಕ್ವ ಮದ್ದು ಕೊಡುತ್ತಾರೆ. ಅಂದಹಾಗೆ ಇವರದ್ದು ವ್ಯವಹಾರಕ್ಕಿಂತ ರೋಗಿಗಳ ಅಭ್ಯುದಯವೇ ಮೂಲಮಂತ್ರ. ಫೋನು ಮಾಡಿದರೆ ಸೈಕಲ್ಲೇರಿ ರೋಗಿಗಳ ಹತ್ತಿರವೇ ಬಂದು ರೋಗದ ಲಕ್ಷಣ ಗುರುತಿಸಿ, ಔಷಧಿಗಾಗಿ ಅವರ ತೋಟದ ಲಂಟಾನಗಳಲ್ಲೇ ಬಳ್ಳಿ, ಎಲೆಗಳನ್ನೆಲ್ಲಾ ಹುಡುಕಿ, ರೋಗಿಗಳಿಗೆ ನಿರ್ದಿಷ್ಟ ಕ್ರಮದಲ್ಲಿ ಹಚ್ಚಿಬಿಡುತ್ತಾರೆ.

ಆದರೆ ಮಾಡಿದ ಸೇವೆಗೆ ದುಡ್ಡು ಕೇಳುವುದಿಲ್ಲ. ಹಾಗೇ ದೂರದ ಊರುಗಳಿಂದ ಗಿಡಮೂಲಿಕೆ ತರಿಸಬೇಕಾಗಿ ಬಂದರೆ ಮಾತ್ರ ಪ್ರಯಾಣಭತ್ಯೆಯನ್ನು ಕೇಳುತ್ತಾರೆ. ಅಮೃತಬಳ್ಳಿ, ಕುಟುಜ, ಸರ್ಪಗಂಧ, ಸಾಂಬಾರುಬಳ್ಳಿ ಮುಂತಾದ ಕೆಲ ಸಾಮಾನ್ಯ ಸಸ್ಯಗಳಂತೆ ಕಾಣುವ ಅಸಾಮಾನ್ಯ ಗುಣವಿರುವ ಗಿಡಗಳ ಫಲ, ಚಿಗುರು, ತೊಗಟೆಗಳೇ ಇವರಿಗೆ ರೋಗಪರಿಹಾರಿಕ ಆಸ್ತಿಗಳಾಗಿ ಕಾಣುತ್ತವೆ.
ಪರಿಸರ ಕಳಕಳಿಯನ್ನೂ, ಇಂತಹ ಸಸ್ಯಗಳ ಬಗ್ಗೆ, ಅದರ ಗುಣಾವಗುಣಗಳ ಬಗ್ಗೆ ಅರಿವು ಮೂಡಿಸುವ ಹಪಹಪಿ ಇವರದ್ದು. ಅದಕ್ಕಾಗಿಯೇ ಪಾರಂಪರಿಕ ವೈದ್ಯಪರಿಷತ್ತು ಎನ್ನುವ ಕಾರ್ಯಕ್ರಮಗಳ ಅಡಿಯಲ್ಲಿ ದಕ್ಷಿಣಕನ್ನಡ ಹಾಗು ಉಡುಪಿಜಿಲ್ಲೆಯ ಹಲವಾರು ಕಡೆ ಈ ಕುರಿತು ಕಾರ್ಯಕ್ರಮಗಳನ್ನೂ ನಡೆಸಿದ ಖ್ಯಾತಿ ಇವರದ್ದು. ಸುಮಾರು 200-300 ಸಸ್ಯಗಳನ್ನು ಇವರು ರೋಗದ ನಾಶಕ್ಕಾಗಿ ಉಪಯೋಗಿಸಿದ್ದು, ಸಾಧಾರಣ ಮುವತ್ತು ಬಗೆಯ ಸಸ್ಯಗಳನ್ನು ತಮ್ಮ ತೋಟದಲ್ಲೇ ಬೆಳೆಸುತ್ತಿದ್ದಾರೆ..

’ಏಸಿಯಲ್ಲಿ ಕೂತವನಿಗೂ, ಸಾಮಾನ್ಯ ಮನುಷ್ಯನಿಗೂ.. ಈ ಗಿಡಮೂಲಿಕೆ ಮದ್ದು ಬೇರೆ ಬೇರೆ ರೀತಿ ಪ್ರಭಾವ ಬೀರುತ್ತದೆ. ಎಲ್ಲ ರೋಗಗಳಿಗೂ ಔಷದಿ ಪ್ರಕೃತಿಯಲ್ಲೇ ಇದೆ. ಕ್ಯಾನ್ಸರ್ ನಂತಹ ಮಾರಕ ರೋಗಗಳಿಗೂ ಇಲ್ಲಿ ಮದ್ದಿದೆ. ಅದನ್ನು ಹುಡುಕಿ ತೆಗೆಯುವ ಮನಸ್ಸಿರಬೇಕಷ್ಟೆ, ಎನ್ನುವ ದಿವಾಕರರು ಇಂತಹ ಮದ್ದು ತಗೊಂಡರೆ ವಾಸಿಯಾಗುತ್ತದೆ ಎನ್ನುವ ಧೈರ್ಯ ರೋಗಿಗಳಲ್ಲಿ ಇರಬೇಕು.. ಆಗ ಮಾತ್ರ ನಮ್ಮ ಪ್ರಯತ್ನ ಸಫಲವಾಗುತ್ತದೆ. ಈ ಕುರಿತು ವಿದ್ಯಾರ್ಥಿಗಳಿಗೆ ಕಾರ್ಯಾಗಾರ ಹಮ್ಮಿಕೊಳ್ಳುವ ಆಶಯವನ್ನೂ ವ್ಯಕ್ತಪಡಿಸುತ್ತಾರೆ.
ದಿವಾಕರ್
ಒಟ್ಟಾರೆಯಾಗಿ ಸೇವಾಮನೋಭಾವದಿಂದ ಮದ್ದು ಕೊಡದೇ, ವ್ಯವಹಾರದ ಚಪಲದಿಂದಲೇ ಮದ್ದು ತೀಡಿಬಿಡುವ ಆಧುನಿಕ ವೈದ್ಯರಿಗೂ.. ಇವರೊಂದು ಮಾದರಿ. ಪ್ರಕೃತಿಯ ಬಗ್ಗೆ ದಿವ್ಯನಿರ್ಲಕ್ಷ ತಾಳುವ ಮಂದಿಗೆ ಮದ್ದಿನ ಮೂಲಕ ಉತ್ತರ ಕೊಡುವ ಇವರ ಪ್ರಕೃತಿ ಸೇವಾ ಪರಿಚಾರಿಕೆ. ನಿರಂತರವಾಗಿ ಮುಂದುವರೆಯಲಿ ಎನ್ನುವುದೇ ಅಭಿಲಾಷೆ. ಹಾಂ, ನಿಮ್ಮೂರಲ್ಲೂ ಇವರಂತಹ ಅಭಿವ್ಯಕ್ತಿಯುಳ್ಳವರು ಇರಬಹುದು. ಅಂತವರನ್ನು ಪ್ರೋತ್ಸಾಹಿಸಲು ಮಾತ್ರ ಮರೆಯಬೇಡಿ.

ಇವರನ್ನು ಸಂಪರ್ಕಿಸುವುದಾದಲ್ಲಿ 984362465 ಗೆ ಫೋನಾಯಿಸಿ.

 

Author : Prasad Shenoy

Readers' Comments (0)
Select Language : 
Press F12 to toggle Indian language and English
Your Name : 
Characters Remaining: 5000
 
 
Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited