Untitled Document
Sign Up | Login    
ನಮನ್ - ಪ್ರಸನ್ : ಪರಿಸರ ಕಾಳಜಿಯ ಸೈಕಲ್ ಪ್ರೇಮಿ ಬೆಂಗಳೂರಿನ ಯುವ ಸಹೋದರರು.


ಪರಿಸರಮಾಲಿನ್ಯದ ಕುರಿತು ವೇದಿಕೆಯನ್ನೇರಿ ಗಂಟೆಗಟ್ಟಲೆ ಭಾಷಣ ಬಿಗಿಯುವವರು ಬಹಳ ಮಂದಿ ಇದ್ದಾರಾದರೂ ಆಡಿದ ಮಾತನ್ನು ಕಾರ್ಯರೂಪಕ್ಕೆ ಇಳಿಸುವವರು ಬಹಳೇ ವಿರಳ. ಅಂತಹ ಇಂದಿನ ದಿನಗಳಲ್ಲಿ ಪರಿಸರಮಾಲಿನ್ಯದ ಬಗ್ಗೆ ಅತೀವ ಕಾಳಜಿ ವಹಿಸುತ್ತಾ ಇತರರಿಗೂ ಮಾರ್ಗದರ್ಶಕರೆನಿಸಿರುವ ಇಬ್ಬರು ಯುವಕರ ಬಗ್ಗೆ ನಾಲ್ಕು ವಾಕ್ಯ ಬರೆದು ಓದುಗರಿಗೆ ಅವರ ದಿನಚರಿ, ಕಾಯಕ ಹಾಗೂ ಪರಿಸರಮಾಲಿನ್ಯದ ಬಗ್ಗೆ ಅವರು ವಹಿಸುತ್ತಿರುವ ಅಪೂರ್ವ ಕಾಳಜಿಯನ್ನು ತಿಳಿಸುವುದೇ ಈ ಬರಹದ ಉದ್ದೇಶ.

ಒಬ್ಬರು...20 ವರ್ಷ ವಯಸ್ಸಿನ ನಮನ್ ಎನ್.ಹೆಗ್ಡೆ : ಬೆಂಗಳೂರಿನ ಮತ್ತಿಕೆರೆಯಲ್ಲಿರುವ ಎಮ್.ಎಸ್. ರಾಮಯ್ಯ ಇನ್ಸ್ಟಿಟ್ಯೂಟ್ ಆಫ್ ಟೆಕ್ನೋಲಜಿಯಲ್ಲಿ ಅಂತಿಮ ವರ್ಷದ ಏಳನೇ ಸೆಮಿಸ್ಟರ್ ನಲ್ಲಿ ವ್ಯಾಸಂಗಮಾಡುತ್ತಿರುವ ವಿದ್ಯಾರ್ಥಿ. ಚಿಕ್ಕಂದಿನಿಂದಲೂ ಪರಿಸರಮಾಲಿನ್ಯದ ಬಗ್ಗೆ ಅತ್ಯಂತ ಕಾಳಜಿ ವಹಿಸುತ್ತಿರುವ ಯುವಕ. ಕಾಲೇಜಿನ ಕ್ಯಾಂಪಸ್ ನಲ್ಲಿಯೇ ಇರುವ MSRIT ಹಾಸ್ಟೆಲ್ ನಲ್ಲಿಯೇ ನೆಲಸುತ್ತಿದ್ದು ಕ್ಯಾಂಪಸ್ ಒಳಗಡೆ ಹಾಗೂ ಕಾಲೇಜಿಗೆ ಹೋಗುವಾಗಲೆಲ್ಲ ಸೈಕಲಿನ ಉಪಯೋಗವನ್ನೇ ಮಾಡುತ್ತಿದ್ದಾರೆ... ವಿಶೇಷವೆಂದರೆ ಮತ್ತಿಕೆರೆಯಲ್ಲಿರುವ ಕಾಲೇಜಿನಿಂದ 22 ಕಿಲೋಮೀಟರ್ ದೂರದಲ್ಲಿರುವ ಅಂದರೆ, ಬೆಂಗಳೂರಿನ ಹಳೇ ವಿಮಾನ ನಿಲ್ದಾಣ ರಸ್ತೆಯ HAL ಕಂಪೆನಿಯ ಹಿಂದುಗಡೆ ಇರುವ ಎಲ್.ಬಿ ಶಾಸ್ತ್ರಿ ನಗರದಲ್ಲಿರುವ ಮನೆಗೆ ಹದಿನೈದು ದಿನಗಳಿಗೊಮ್ಮೆ ಬಂದು ಹೋಗುವ ಈ ಯುವಕ ಸೈಕಲ್ ಪ್ರಯಾಣವನ್ನೇ ತಮ್ಮದಾಗಿಸಿಕೊಂಡಿದಾರೆಂದರೆ ನಿಜವಾಗಿಯೂ ಆಶ್ಚರ್ಯವಾಗದಿರದು! ಸೈಕಲ್ ಸವಾರಿಯ ಸಂದರ್ಭ ರಸ್ತೆಯಲ್ಲಿನ ವಾಹನಗಳಿಂದ ಹೊರಸೂಸುವ ಹೊಗೆ ಮತ್ತು ರಸ್ತೆಯ ಧೂಳಿನಿಂದ ರಕ್ಷಣೆಪಡೆಯಲು ಮುಖ ಮುಚ್ಚುವ ಮಾಸ್ಕ್ ನ್ನು ಉಪಯೋಗಿಸುತ್ತಿದ್ದಾರೆ.

ನಮನ್ ರವರ ಆರೋಗ್ಯ ಅಥವಾ ದೈಹಿಕ ಫಿಟ್‌ನೆಸ್ ಬಗ್ಗೆ ಹೇಳುವುದಾರೆ ಕಳೆದ ಎರಡು ವರ್ಷಗಳಿಂದ ಕಾಲೇಜಿನಲ್ಲಿ ಅಥ್ಲೇಟ್ ಚಾಂಪಿಯನ್ ಆಗಿರುವ ಇವರು ಕಳೆದ ವರ್ಷದಲ್ಲಿ ಕಾಲೇಜಿನ ಅದ್ಭುತ ಆಟಗಾರನಾಗಿ ಮಿಂಚಿದ್ದಾರೆ. ಅದಲ್ಲದೇ ಪ್ರಸ್ತುತ ವರ್ಷದಲ್ಲಿ ಕಾಲೇಜಿನ ಬಾಸ್ಕೆಟ್ ಬಾಲ್ ತಂಡದಲ್ಲಿ ಭಾಗವಹಿಸಿ ಯುನಿವರ್ಸಿಟಿ ಮಟ್ಟದಲ್ಲಿ ಜರಗಿದ ಆಟದ ಸ್ಪರ್ಧೆಯಲ್ಲಿ ತಂಡವನ್ನು ವಿಜೇತ ತಂಡವನ್ನಾಗಿ ಪರಿವರ್ತಿಸಲು ವಿಶೇಷ ಶ್ರಮವಹಿಸಿರುವ ನಮನ್ ಎಂದಿಗೂ ಸ್ಕೂಟರ್ ಅಥವಾ ಕಾರಿನಂತಹ ಹೊಗೆಕಾರುತ್ತಾ ಪರಿಸರ ನಾಶಮಾಡುವ ವಾಹನಗಳ ಉಪಯೋಗವನ್ನು ಮನಸಾ ಧ್ವೇಷಿಸುತ್ತಾರೆ.

ಇನ್ನೊಬ್ಬರು, ಇವರ ಸಹೋದರ ಪ್ರಸನ್ ಎನ್.ಹೆಗ್ಡೆ : 18 ವರ್ಷದ ವಯಸ್ಸಿನವರಾಗಿದ್ದು ಬೆಂಗಳೂರಿನ ಲ್ಯಾಂಗ್ ಫೋರ್ಡ್ ಟೌನ್ ನ ಸೈಂಟ್ ಜೋಸೆಫ್ ಕಾಲೇಜಿನಲ್ಲಿ ಬಿ ಎಸ್ಸಿಯ 2ನೇ ಸೆಮಿಸ್ಟರ್ ನಲ್ಲಿ ಓದುತ್ತಿರುವ ಚಿಗುರುಮೀಸೆಯ ಯುವಕ. ಈತ ಕೂಡ ಮನೆಯಿಂದ 12 ಕಿಲೋಮೀಟರ್ ದೂರದಲ್ಲಿರುವ ಕಾಲೇಜಿಗೆ ಹೋಗಲು,ಬರಲು ಸೈಕಲನ್ನೇ ತನ್ನ ವಾಹನವನ್ನಾಗಿ ಆಯ್ಕೆ ಮಾಡಿಕೊಂಡಿದ್ದಾರೆ. ಈ ಯುವಕನಿಗೂ ಅಥ್ಲೇಟ್‌ನ ಗೀಳು ಈತನ ಅಣ್ಣನಿಂತಲೂ ಬಹಳವಾಗಿದ್ದು ಮುಂಜಾನೆ 6 ಗಂಟೆಗೇ ತನ್ನ ಸೈಕಲ್ ನೊಂದಿಗೆ ಮನೆಬಿಟ್ಟು ಕಂಠೀರವ ಸ್ಟೇಡಿಯಂ ತಲುಪಿ ದೈಹಿಕ ಅಭ್ಯಾಸ ಮುಗಿಸಿ 9 ಗಂಟೆಗೆ ಕಾಲೇಜಿಗೆ ಹೋದರೆ ಸಂಜೆ 5 ಗಂಟೆಗೆ ಮನೆಗೆ ಬರುತ್ತಾರೆ. ಈತ ಕೂಡ ಹೊಗೆ ಹಾಗೂ ಧೂಳಿನಿಂದ ಬಚಾವಾಗಲು ಮುಖದ ಮಾಸ್ಕನ್ನು ಉಪಯೋಗಿಸುತ್ತಿದ್ದಾರೆ. ಒಂದು ವೇಳೆ ಎಲ್ಲಾದರೂ ಅಗತ್ಯದ ಕಾರ್ಯಕ್ಕಾಗಿ ಅಟೋರಿಕ್ಷಾದ ಅಗತ್ಯವಾದರೆ ಎಷ್ಟೇ ವಿಳಂಬವಾದರೂ ಹಸಿರುಬಣ್ಣದ ರಿಕ್ಷಾಕ್ಕಾಗಿ ಕಾದಾರೇ ವಿನಃ ಅನ್ಯ ವಾಹನ ಉಪಯೋಗಿಸುವುದೇ ಇಲ್ಲ.

ಇವರಿಬ್ಬರ ಧ್ಯೇಯದಿಂದಾಗಿ ಕಳೆದ ಆರೇಳು ವರ್ಷಗಳಿಂದ ದೀಪಾವಳಿ ಹಬ್ಬದ ಸಮಯ ಮನೆಯಲ್ಲಿ ಸಿಡಿಮದ್ದುಗಳ ಖರೀದಿಯಾಗಲೀ ಸಿಡಿಸುವುದಾಗಲೀ ನಿಷೇಧವಾಗಿದೆ! ಅಕ್ಕಪಕ್ಕದ ಮನೆಗಳಲ್ಲಿ ಪಟಾಕಿ ಸುಡುಮದ್ದುಗಳ ಬರಾಟೆನಡೆಯುತ್ತಿದ್ದರೆ ಇವರ ಮನೆಯಲ್ಲಿ ಅಂದು ಕೇವಲ ದೀಪದ ಸಾಲು ಮಾತ್ರ ಕಂಡುಬರುತ್ತದೆ.

ಈ ಯುವಕರು ಮೂಲತಃ ಉಡುಪಿ ಜಿಲ್ಲೆಯ ಕೋಟದ ಸಮೀಪವಿರುವ ಬನ್ನಾಡಿ ಎಂಬಲ್ಲಿಯವರಾಗಿದ್ದು ಶ್ರೀಯುತ ನವೀನ್ ಹೆಗ್ಡೆಯವರ ಸುಪುತ್ರರು.
ಈ ಸಂದರ್ಭದಲ್ಲಿ ಅಗತ್ಯವಾಗಿ ಉಲ್ಲೇಖಿಸಲೇ ಬೇಕಾದ ವಿಷಯವೆಂದರೆ ಈ ಯುವಕರ ತಾತ ಅಂದರೆ ಶ್ರೀ ನವೀನ್ ಹೆಗ್ಡೆಯವರ ತಂದೆ ಶ್ರೀ. ಬನ್ನಾಡಿ ಭೋಜ ಹೆಗ್ಡೆಯವರು M.A, LLB ಪದವೀಧರರಾಗಿದ್ದು ಕರ್ನಾಟಕ ಸರಕಾರದ ಮೀನುಗಾರಿಕಾ ಇಲಾಖೆಯಲ್ಲಿ ಉದ್ಯೋಗದಲ್ಲಿದ್ದರು. ಆ ಸಮಯದಲ್ಲಿ ಅಂದರೆ 1970 ರ ದಶದಲ್ಲಿ ಮುಖ್ಯಮಂತ್ರಿ ದೇವರಾಜ ಅರಸರ "ಉಳುವವನೇ ಹೊಲದೊಡೆಯ" ಕಾನೂನು ಹೊರಬಂದ ಸಮಯದಲ್ಲಿ ಉದ್ಯೋಗಕ್ಕೆ ರಾಜಿನಾಮೆಯನ್ನಿತ್ತು ತನ್ನ ಪೂರ್ವಜರಿಂದ ಬಂದಿರುವ ಜಮೀನಿನ ಉಸ್ತುವಾರಿಯನ್ನು ನೋಡಿಕೊಳ್ಳುತ್ತಿದ್ದಾರೆ ವಯಸ್ಸಿನಲ್ಲಿ 75 ವರ್ಷಗಳನ್ನೂ ದಾಟಿರುವ ಅವರು ಅತ್ಯುತ್ತಮ ಆರೋಗ್ಯ ಹಾಗೂ ದೃಡಕಾಯರಾಗಿದ್ದಾರೆ.

ಪರಿಸರ ಮಾಲಿನ್ಯವನ್ನು ದೂರೀಕರಿಸಲು ಶಬ್ಧವಿಲ್ಲದೇ ಅಳಿಲಸೇವೆಯನ್ನು ಮಾಡುತ್ತಿರುವ ಇವರ ಕಾರ್ಯಕ್ಕಾಗಿ ಶಹಬ್ಬಾಸ್ ಎನ್ನಲೇಬೇಕು.

 

Author :  

Readers' Comments (0)
Select Language : 
Press F12 to toggle Indian language and English
Your Name : 
Characters Remaining: 5000
 
 
Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited