ಕೇಶವ ಪ್ರಸಾದ್
ಭಾರತ ಕೃಷಿ ಪ್ರಧಾನ ರಾಷ್ಟ್ರ. ರೈತ ನಮ್ಮ ದೇಶದ ಬೆನ್ನೆಲುಬು. ಆದರೆ ಇಲ್ಲಿನ ಬರಗಾಲದ ಛಾಯೆ, ಬಿತ್ತನೆ ಬೀಜಗಳ ಸಮಸ್ಯೆ, ಬೆಳೆಗಳಿಗೆ ಸಿಗದ ಬೆಂಬಲ ಬೆಲೆ,ಕೀಟನಾಶಕಗಳ ಸಮರ್ಪಕ ಪೂರೈಕೆ ಇಲ್ಲದಿರುವುದು,ಮಧ್ಯ ವರ್ತಿಗಳ ಹಾವಳಿ ಹಾಗೂ ಇನ್ನಿತರ ಸಮಸ್ಯೆಗಳಿಂದ ವರ್ಷದಿಂದ ವರ್ಷಕ್ಕೆ ಆ ಬೆನ್ನೆಲುಬಿನ ಸ್ಥಿತಿ ದಯನೀಯವಾಗುತ್ತಿದೆ. ರೈತನ ಕೂಗು ಅರಣ್ಯ ರೋದನವಾಗಿದೆ. ಹೀಗಿರುವಾಗ ಇಲ್ಲೊಬ್ಬ ರೈತರು ಮಿಶ್ರ ಬೆಳೆಗಳನ್ನು ಬೆಳೆದು ಎಲ್ಲಾ ರೈತರಿಗೆ ಮಾದರಿಯಾಗಿದ್ದಾರೆ.
ದ.ಕ.ಜಿಲ್ಲೆಯ ಸುಳ್ಯ ತಾಲ್ಲೂಕಿನ ತೊಡಿಕಾನ ಗ್ರಾಮದ ಗುಂಡಿಗದ್ದೆಯ ಕೇಶವ ಪ್ರಸಾದ್‌ರರು ಮಿಶ್ರ ಬೆಳೆ ಕೃಷಿ ಮಾಡಿ ಅದರಲ್ಲಿ ಯಶಸ್ವಿಯಗಿದ್ದಾರೆ. ಇವರ ತಂದೆ ದಿ.ಭೀಮ ಭಟ್ಟರು ತಮ್ಮ ಕಾಲದಲ್ಲಿಯೇ ಜಮೀನಿನಲ್ಲಿ ಮಿಶ್ರ ಬೆಳೆ ಪ್ರಯೋಗ ಮಾಡಿದ್ದು, ಈ ಕಾಯಕವನ್ನು ಕೇಶವ ಪ್ರಸಾದ್ ಈಗ ಮುಂದುವರಿಸಿಕೊಂಡು ಬಂದಿದ್ದಾರೆ.
ಕೇಶವ ಪ್ರಸಾದ್ ಅವರ ತೋಟ
ನಮಗೆ ಹಿರಿಯರಿಂದ ಬಂದ 27 ಎಕರೆ ಕೃಷಿ ಭೂಮಿ ಇದೆ. ಕೃಷಿ ಕಾರ್ಮಿಕರನ್ನು ಕೆಲಸಕ್ಕೆ ಇಟ್ಟುಕೊಂಡಿದ್ದೇನೆ. ನಮ್ಮ ಕುಟುಂಬ ಕೃಷಿಯಲ್ಲಿ ಪೂರ್ಣ ನೆಮ್ಮದಿ ಕಂಡಿದೆ. ಕೃಷಿ ಕಾರ್ಮಿಕರಿಗೆ ಬೇಕಾದ ಮಾಹಿತಿ ಕೊಡುತ್ತ ನಾನು ಕೂಡ ಅವರೊಟ್ಟಿಗೆ ದುಡಿಯುತ್ತಿದ್ದೇನೆ. ನಮಗೆ ಯಾವುದಕ್ಕೂ ಕೊರತೆ ಇಲ್ಲ. ಕೈ ತುಂಬಾ ಆದಾಯದ ಹುಚ್ಚು ಕಲ್ಪನೆಯಿಂದ ಐ.ಟಿ - ಬಿ.ಟಿ ಉದ್ಯೋಗದ ಬೆನ್ನು ಹತ್ತಿ ನೆಮ್ಮದಿ ಇಲ್ಲದ ಜೀವನಕ್ಕಿಂತ ಇರುವ ಭೂಮಿಯಲ್ಲಿ ಮಿಶ್ರ ಬೆಳೆ ಕೃಷಿಯಿಂದ ಕೈ ತುಂಬಾ ಆದಾಯ ಸಂಪಾದಿಸಬಹುದು ಎಂದು ಹೇಳುತ್ತಾ ಕೇಶವ ಪ್ರಸಾದ್ ಮುಖ ಅರಳಿಸುತ್ತಾರೆ.
ನೀರಿನಾಶ್ರಯವೂ ಸಾಕಾಷ್ಟು ಇರುವ ಅವರ 27 ಎಕರೆ ಭೂಮಿಯಲ್ಲಿ 350 ಪಸಲು ಬರುವ ತೆಂಗಿನ ಮರಗಳಿವೆ, 4,೦೦೦ ಇಳುವರಿ ನೀಡುವ (ನಾಟಿ,ಶ್ರೀನಗರ,ಮೋಹಿತ್ ನಗರ) ಅಡಿಕೆಮರಗಳು, ವಿವಿಧ ತಳಿಗಳ 2000 ಕೊಕ್ಕೊ ಮರಗಳು, 4,000ವಿವಿಧ ತಳಿಗಳ ಬಾಳೆ ಮರಗಳು, 1,200 ಹಾಲುಕೊಡುವ ರಬ್ಬರ್ ಮರಗಳು, 300 ಚಿಕ್ಕ ರಬ್ಬರ್ ಮರಗಳು, ಕಾಳು ಮೆಣಸು ಬಳ್ಳಿಗಳು,ಏಲಕ್ಕಿ,ಲವಂಗ ಗಿಡಗಳಿವೆ.
ಅಲ್ಲದೇ ತೊಂಡೆ,ಬದನೆ, ಸೇರಿದಂತೆ ಹಲವು ತರಕಾರಿಗಳನ್ನು ಬೆಳೆಯುತ್ತಿದ್ದಾರೆ. 5 ಜಾನುವಾರುಗಳಿದ್ದು ಅದರಲ್ಲಿ 2 ಹಾಲುಕೊಡುವ ದನಗಳಿವೆ. ಇವುಗಳಿಗೆ ಬೇಕಾದ ಹೈಬ್ರಿಡ್ ಹುಲ್ಲನ್ನೂ ಇವರ ತೋಟದಲ್ಲೇ ಬೆಳೆಸುತ್ತಿದ್ದಾರೆ.
ಕೇಶವ ಪ್ರಸಾದ್ ಅವರ ತೋಟದಲ್ಲಿ ಕೊಕ್ಕೊ ಮರ
ಕೇಶವ ಪ್ರಸಾದ್ ಹೇಳುವಂತೆ ಇವರದ್ದು ಪೂರ್ಣ ಪ್ರಮಾಣದ ಸಾವಯವ ಕೃಷಿಯಲ್ಲವಂತೆ. ಗಿಡಗಳು ಬೆಳೆಯಲು ಮೊದಲ ವರ್ಷ ರಾಸಾಯನಿಕ ಗೊಬ್ಬರವನ್ನು ಸ್ವಲ್ಪ ಪ್ರಮಾಣದಲ್ಲಿ ಹಾಕುತ್ತಾರಂತೆ. ಈಗ 12 ವರ್ಷಗಳಿಂದ ನಾವೂ ದೊಡ್ಡ ಕೃಷಿ ಮರಗಳಿಗೆ,ಗಿಡಗಳಿಗೆ ರಾಸಾಯನಿಕ ಗೊಬ್ಬರಗಳನ್ನು ಹಾಕುತ್ತಿಲ್ಲ, ಕೇವಲ ಹಟ್ಟಿ ಗೊಬ್ಬರ ಮತ್ತು ಬೂದಿಯನ್ನು ಹಾಕುತ್ತೇವೆ ಎಂದು ತಿಳಿಸುತ್ತಾರೆ.
ಅಲ್ಲದೆ ತೋಟದಲ್ಲಿ ಬೆಳೆದ ಹುಲ್ಲುಗಳನ್ನು ಇವರು ಕೀಳುವುದಿಲ್ಲ. ಇದರಿಂದ ಮಣ್ಣು ನೀರಿನಾಂಶವನ್ನು ಹಿಡಿದಿಟ್ಟಿಕೊಳ್ಳಲು ಸಹಕಾರಿಯಾಗುತ್ತದೆ. ಈ ಕಾರಣದಿಂದಲೇ ಇವರ ಭೂಮಿ ಸದಾ ಹಸಿರಾಗಿರುತ್ತವೆ. ತರಕಾರಿ ಬೆಳೆಗೆ ಯಾವುದೇ ರಾಸಾಯನಿಕ ಗೊಬ್ಬರ ಬಳಸುತ್ತಿಲ್ಲ. ಇದಕ್ಕೆ ಕೇವಲ ನೆಲಗಡಲೆ ಹಿಂಡಿ ಹಾಕುತ್ತಾರೆ.
ಕೃಷಿ ಕಾರ್ಮಿಕರು ಲೆಕ್ಕಕ್ಕೆ 13 ಮಂದಿ ಇದ್ದಾರೆ, ಆದರೆ ದಿನನಿತ್ಯ ಬರುವವರು ಕೇವಲ ಮೂರು-ನಾಲ್ಕು ಮಂದಿಯಷ್ಟೆ. ಆದುದರಿಂದ ಇವರೂ ಕೂಡ ಕೃಷಿ ಚಟುವಟಿಕೆಯಲ್ಲಿ ಸೇರಿಕೊಳ್ಳುತ್ತಾರೆ. ಒಂದಿಂಚಿನ ಪೈಪ್‌ನಲ್ಲಿ ಸದಾ ನೀರು ಬರುತ್ತಿರುತ್ತದೆ. ಇದಕ್ಕೆ ಜಟ್ ಸಿಕ್ಕಿಸಿ ಬಿಟ್ಟರೆ ಅದು ದಿನದ 24 ಗಂಟೆಗಳ ಕಾಲ ತಿರುಗುತ್ತಿರುತ್ತದೆ. ಇನ್ನು ಕರೆಂಟ್ ಪಂಪ್ ಇದ್ದು ಪಕ್ಕದ ತೋಡಿನಿಂದ ತೋಟಕ್ಕೆ ನೀರು ಹಾಯಿಸುತ್ತಾರೆ. ಇದರಿಂದ ಇವರ ಭೂಮಿಗೆ ನೀರಿನ ಕೊರತೆ ಇಲ್ಲ.
ಕೇಶವ ಪ್ರಸಾದ್ ಪ್ರಾಣಿ ಪಕ್ಷಿ ಪ್ರಿಯರಾಗಿದ್ದು, ಮೊಲ ಸಾಕಣೆಯಲ್ಲಿ ತೊಡಗಿದ್ದಾರೆ. ಅಲ್ಲದೆ ತಮ್ಮ ತೋಟದಲ್ಲಿ ಅಲ್ಲಲ್ಲಿ ಪೇರಳೆ ಮರಗಳನ್ನು ಮತ್ತು ಗಾಂಧಾರಿ ಮೆಣಸಿನ ಗಿಡಗಳನ್ನು ಬೆಳೆಸಿದ್ದಾರೆ. ಈ ಮರಗಳಿಗೆ ಪಕ್ಷಿಗಳು ಆಹಾರ ತಿನ್ನಲು ಬರುವುದರಿಂದ ಪಕ್ಷಿಗಳ ಕಲರವ ದಿನ ನಿತ್ಯ ಮೇಳೈಸುತ್ತದೆ.
ದಿಡೀರ್ ಕೃಷಿ ಬೆಳೆಗಳಿಗೆ ಬೆಲೆ ಕುಸಿತ, ಹವಾಮಾನದ ವೈಪರಿತ್ಯ, ರೋಗಗಳಿದಿಂದ ನಷ್ಟಕೊಳಗಾಗುವ ರೈತರು ನಮ್ಮಲ್ಲಿ ಅನೇಕರಿದ್ದಾರೆ. ಆದರೆ ಈ ನಷ್ಟವನ್ನು ಮಿಶ್ರ ಕೃಷಿಯಿಂದ ಸರಿದೂಗಿಸಿಕೊಳ್ಳಬಹುದು. ನಮ್ಮಲ್ಲಿ ಮಿಶ್ರ ಬೆಳೆ ಕೃಷಿ ಮಾಡುವ ರೈತರ ಕೊರತೆ ಇದೆ ಎಂಬ ಅಭಿಪ್ರಾಯವೂ ಆಗಾಗ ಕೇಳಿಬರುತ್ತಿವೆ. ಆದರೆ ಒಂದು ಕೃಷಿಯಲ್ಲೇ ಕೈಸುಟ್ಟುಕೊಳ್ಳುವ ಪರಿಸ್ಥಿತಿಯಿರುವ ಇಂದಿನ ದಿನಗಳಲ್ಲಿ ಮಿಶ್ರ ಕೃಷಿ ಬೆಳೆಯಲು ರೈತರು ಹಿಂದೇಟು ಹಾಕುತ್ತಾರೆ. ಈ ಹಿನ್ನಲೆಯಲ್ಲಿ ಸರ್ಕಾರ ಮಿಶ್ರ ಬೆಳೆಗೆ ಸರಿಯಾದ ಪ್ರೋತ್ಸಾಹ ನೀಡಿದಲ್ಲಿ ನಮ್ಮದೇಶದ ಬೆನ್ನೆಲುಬಾದ ರೈತ ನೆಮ್ಮದಿಯ ಜೀವನ ಸಾಗಿಸುವುದರಲ್ಲಿ ಎರಡು ಮಾತಿಲ್ಲ.
ಅದೇನೇ ಇದ್ದರೂ ಮನಸ್ಸಿದ್ದರೆ ಮಾರ್ಗ ಎಂಬುದಕ್ಕೆ ಕೇಶವ ಪ್ರಸಾದ್ ಒಂದು ಉತ್ತಮ ಉದಾಹರಣೆ. ಇರುವ ಭೂಮಿಯೆಲ್ಲ ಸಂಪೂರ್ಣ ಮಿಶ್ರ ಬೆಳೆ ಕೃಷಿಯಿಂದ ಹಸಿರು ತುಂಬಿ ನಳ ನಳಿಸುತ್ತಿವೆ.
ಹೆಚ್ಚಿನ ಮಾಹಿತಿಗೆ, ಇಚ್ಛಿಸುವವರು ಕೇಶವ ಪ್ರಸಾದ್‌ರ ದೂರವಾಣಿ ಸಂಖ್ಯೆ 9448012135ನ್ನು ಸಂಪರ್ಕಿಸಬಹುದು.
Author : ತೇಜೇಶ್ವರ್ ಕುಂದಲ್ಪಾಡಿ