Untitled Document
Sign Up | Login    
ಧರ್ಮಸ್ಥಳ ಲಕ್ಷದೀಪೋತ್ಸವದಲ್ಲಿ ಆಹಾರ ಅಭಿಯಾನ


ಧರ್ಮಸ್ಥಳ ಲಕ್ಷದೀಪೋತ್ಸವದಲ್ಲಿ ಪ್ರತಿಯೊಬ್ಬರ ಅಕರ್ಷಣೆಯ ಕೇಂದ್ರ ಇಲ್ಲಿನ ರಾಜ್ಯಮಟ್ಟದ ವಸ್ತುಪ್ರದರ್ಶನ. ಯಾರ‍್ಯಾರಿಗೆ ಎನು ಬೇಕು ಸಣ್ಣವರಿಂದ ಹಿಡಿದು ದೊಡ್ಡವರ ತನಕ ಅವರಿಗೆ ಬೇಕಾದ ವಸ್ತುಗಳು ಈ ವಸ್ತುಪ್ರದರ್ಶನ ಮಳಿಗೆಯಲ್ಲಿ ಸಿಗುತ್ತವೆ. ಹಾಗಾಗಿ ಈ ವಸ್ತು ಪ್ರದರ್ಶನದಲ್ಲಿ ಜನ ಜಾತ್ರೆ. ಅದರಲ್ಲೂ ಈ ಬಾರಿ 183 ಮಳಿಗೆಗಳು . ಯಾವುದನ್ನು ನೋಡುವುದು ಯಾವುದನ್ನು ಬಿಡುವುದು. ಅದರಲ್ಲಿ ಈ ಬಾರಿ ಎಲ್ಲರ ಗಮನ ಸೆಳೆದದ್ದು ಆಹಾರ ಸಂರಕ್ಷಣಾ ಅಭಿಯಾನದ ಮಳಿಗೆ.

ಅನ್ನಕ್ಕಾಗಿ ಪರದಾಟ ತಿಂದು ಹೆಚ್ಚಾಗಿ ಎಸೆದಾಟ, ರೈತ ಮಹಿಳೆಯ ಸೊಂಟ ಬಗ್ಗಿದರೆ ಶ್ರೀಮಂತರ ಮನೆಯಲ್ಲಿ ಊಟ, ಅಗತ್ಯಕ್ಕಿಂತ ಹೆಚ್ಚಾಗಿ ಬಡಿಸಿಕೊಂಡು ಚೆಲ್ಲದಿರಿ ಇಂತಹ ಹತ್ತಿಪ್ಪತ್ತು ಸ್ಲೋಗನ್‌ಗಳಿರುವ ಒಂದು ಸಣ್ಣ ಮಳಿಗೆ ಧರ್ಮಸ್ಥಳ ಲಕ್ಷದೀಪದ ವಸ್ತು ಪ್ರದರ್ಶನದಲ್ಲಿತ್ತು. ಈ ಮಳಿಗೆಯಲ್ಲಿ ಯಾವುದೇ ವಸ್ತು ಮಾರುತ್ತಿರಲಿಲ್ಲ. ಮಳಿಗೆಯಲ್ಲಿದ್ದ ಇಬ್ಬರು ವ್ಯಕ್ತಿಗಳು ಬಂದವರಿಗೆ ಒಂದು ಪೇಪರ್‌ ನೀಡಿ ಏನೋ ಹೇಳುತ್ತಿದ್ದರು.. ಅದರೆ ಈ ಮಳಿಗೆಯಲ್ಲಿದ್ದವರು ರಾಜ್ಯ ಮಟ್ಟದಲ್ಲಿ ಗುರುತಿಸಿದ್ದ ವ್ಯಕ್ತಿ. ಇವರ ಪ್ರಯತ್ನದಿಂದಾಗಿ ಒಂದು ಆಹಾರ ಸಂರಕ್ಷಣಾ ಅಭಿಯಾನದ ಆಲೆ ಈಗ ರಾಜ್ಯಾದ್ಯಂತ ಆರಂಭವಾಗಿದೆ.

ಒಂದು ಮಾತಿದೆ,'ಅನ್ನ ಇದ್ದರೆ ಪ್ರಾಣ, ಪ್ರಾಣ ಇದ್ದರೆ ಪರಾಕ್ರಮ'. ಅನ್ನ ನಮ್ಮ ಬದುಕಿನ ಅಂಗ, ಆದರೆ ನಮ್ಮ ಹೊಟ್ಟೆ ಸೇರಬೇಕಾದ ಅನ್ನ ಇಂದು ಹೆಚ್ಚಾಗಿ ಚರಂಡಿ ಸೇರುತ್ತಿದೆ, ಕಸದ ತೊಟ್ಟಿ ಸೇರುತ್ತಿದೆ. ಈ ಹಿನ್ನೆಲೆಯಲ್ಲಿ ಮಡಿಕೇರಿಯ ಕುಶಾಲನಗರದಿಂದ ಆರಂಭಗೊಂಡ ಆಹಾರ ಸಂರಕ್ಷಣಾ ಅಭಿಯಾನ ಈಗ ಲಕ್ಷದ್ವೀಪದಲ್ಲಿ ಜನರಿಗೆ ಅನ್ನದ ಮಹತ್ವದ ಬಗ್ಗೆ ಪ್ರಚಾರ ಮಾಡುತ್ತಿದೆ.

'ತಿನ್ನುವ ಪ್ರತಿ ಕಾಳಿನ ಮೇಲೆ ತಿನ್ನುವವನ ಹೆಸರು ಬರೆದಿದೆ', ಎಂಬ ಒಂದು ಹಿಂದಿ ಗಾದೆ ಮಾತಿದೆ. ಆದರೆ ನಮ್ಮ ದೇಶದಲ್ಲಿ ಆಡಂಬರದ ಹೆಸರಲ್ಲಿ ಅನ್ನವನ್ನು ಪೋಲು ಮಾಡುವವರ ಸಂಖ್ಯೆ ಈಗ ಜಾಸ್ತಿಯಾಗುತ್ತಿದೆ. ಇಂದು ಭಾರತದಲ್ಲಿ ರಾತ್ರಿ ವೇಳೆ ಹಸಿವು ಅಥವಾ ಅರೆಹೊಟ್ಟೆಯಿಂದ ತಿಂದು ಮಲಗುವವರ ಸಂಖ್ಯೆ ನಾವು ಅಂದಾಜು ಮಾಡುವುದಕ್ಕಿಂದ ಜಾಸ್ತಿ ಇದೆ. ಈಗಾಗಲೇ ಜನ ಸಂಖ್ಯೆಯಲ್ಲಿ ಎರಡನೇ ಸ್ಥಾನದಲ್ಲಿರುವ ಭಾರತದಲ್ಲಿ ಇದೇ ರೀತಿ ಆಹಾರದ ಪೋಲು ಹೆಚ್ಚಾದರೆ ಮುಂದೊಂದು ದಿನ ಆಫ್ರಿಕಾದ್ ಬಡ ದೇಶಗಳು ಆಹಾರಕ್ಕಾಗಿ ಪರಿತಪಿಸುತ್ತಿರುವ ಸ್ಥಿತಿ ನಮ್ಮ ದೇಶಕ್ಕೂ ಬರಬಹುದು. ಈ ಹಿನ್ನೆಲೆಯಲ್ಲಿ ಜನರಲ್ಲಿ ಜಾಗೃತಿಗೊಳಿಸಲು ಆರಂಭಗೊಂಡ ಅಭಿಯಾನವೇ ಆಹಾರ ಸಂರಕ್ಷಣಾ ಅಭಿಯಾನ

ಈ ಅಭಿಯಾನವನ್ನು ಆರಂಭಿಸಿದವರು ಕೊಡಗಿನ ಕುಶಾಲನಗರದಲ್ಲಿರುವ ಮನೋಹರ್ ಕುಮಾರ್. ವೃತ್ತಿಯಲ್ಲಿ ಪ್ರೆಸ್‌‌‌ ಮಾಲೀಕರಾಗಿರುವ ಮನೋಹರ್ ಮೂರು ವರ್ಷಗಳ ಹಿಂದೆ ಯಾವುದೋ ಕಾರಣಕ್ಕೆ ಮನೆ ಬಿಟ್ಟು ಊರುರು ಅಲೆಯುತ್ತಾ ಹಸಿವಿನಿಂದ ಕಂಗೆಟ್ಟಿದ್ದಾಗ, ಯಥೇಚ್ಛವಾಗಿ ಕಸದ ತೊಟ್ಟಿಯಲ್ಲಿ ಬಿಸಾಡಿದ ಅನ್ನವನ್ನು ಕಂಡು ಅಂದೇ ಆಹಾರದ ಅಪವ್ಯಯಕ್ಕೆ ಬ್ರೇಕ್‌ ಹಾಕಲು ನಿರ್ಧರಿಸಿದರು. ಆಗಿನಿಂದ ರೂಪುಗೊಂಡಿತು ಈ ಆಹಾರ ಅಭಿಯಾನ.

ಈ ಅಭಿಯಾನ ಆರಂಭವಾಗಿದ್ದು ಹೀಗೆ....


'ತಿನ್ನುವ ಹಕ್ಕಿದೆ ಬಿಸಾಡುವ ಹಕ್ಕು ನನಗಿಲ್ಲ - ಅಗತ್ಯಕ್ಕಿಂತ ಹೆಚ್ಚಾಗಿ ಬಡಿಸಿಕೊಂಡು ಚೆಲ್ಲದಿರಿ ಎಂಬ ಘೋಷವಾಕ್ಯದೊಂದಿಗೆ ಆರಂಭಗೊಂಡ ಅಭಿಯಾನ ಮೊದಲು ಆರಂಭಗೊಂಡದ್ದು ಕೊಡಗು ಜಿಲ್ಲೆಯಲ್ಲಿ. ಜಿಲ್ಲೆಯ ವಿವಿಧೆಡೆ ಶಾಲಾ- ಕಾಲೇಜು ವಿದ್ಯಾರ್ಥಿಗಳಿಗೆ ಆಹಾರ ಸಂರಕ್ಷಣೆ ಕುರಿತು ಪ್ರಬಂಧ, ಸ್ಪರ್ಧೆ ಹಮ್ಮಿಕೊಂಡಿದ್ದರು. ಈ ಸ್ಪರ್ಧೆಯಲ್ಲಿ ಸುಮಾರು 20 ಸಾವಿರ ವಿದ್ಯಾರ್ಥಿಗಳು ಭಾಗವಹಿಸಿದ್ದರು. ನಂತರ ಈ ವಿದ್ಯಾರ್ಥಿಗಳು ತಮ್ಮ ಶಾಲಾ ಕಾಲೇಜು ವ್ಯಾಪ್ತಿಯ ಜನರಲ್ಲಿ ಆಹಾರ ಅಪವ್ಯಯ ತಡೆಗಟ್ಟಲು ಜಾಗೃತಿ ಮೂಡಿಸುತ್ತಿದ್ದರು. ಈ ಅಭಿಯಾನದ ಪ್ರಥಮ ಫಲವಾಗಿ ಕೊಡಗು ಜಿಲ್ಲಾ ಪಂಚಾಯತ್ ಇವರ ಬೇಡಿಕೆಗೆ ಸ್ಪಂದಿಸಿ ನಿರ್ಣಯ ಕೈಗೊಂಡಿತು. ಈ ಅಭಿಯಾನವನ್ನು ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತಿನ ವತಿಯಿಂದ ನಡೆಯುತ್ತಿರುವ ಮಕ್ಕಳ ಅಧಿವೇಶನ, ವಿದ್ಯಾರ್ಥಿ- ವಿಜ್ಙಾನಿ ನೇರ ಸಂವಾದ ಕಾರ್ಯಕ್ರಮ, ಬೆಳಗಾವಿಯಲ್ಲಿ ನಡೆದ 2 ನೇ ವಿಶ್ವ ಕನ್ನಡ ಸಮ್ಮೇಳನದಲ್ಲಿ ಕರಪತ್ರಗಳನ್ನು ಹಂಚುವ ಮೂಲಕ ಗಮನ ಸಳೆದಿದ್ದಾರೆ. ಅಪವ್ಯಯ ತಪ್ಪಿಸಲು ಎಲ್ಲಾ ಶಾಸಕರಿಗೆ, ಮಂತ್ರಿಗಳಿಗೆ ಮುಖ್ಯಮಂತ್ರಿಗಳಿಗೆ, ಪ್ರಧಾನಮಂತ್ರಿಗಳಿಗೆ, ರಾಷ್ಟ್ರಪತಿಗಳಿಗೆ ಪತ್ರ ಬರೆದಿದ್ದು ಮನವಿ ಸಲ್ಲಿಸಿದ್ದಾರೆ. ಈಗಾಗಲೇ ರಾಜ್ಯದ ಹಲವು ಜಿಲ್ಲಾ ಪಂಚಾಯತ್‌ಗಳು ಇವರ ಮನವಿಗೆ ಸ್ಪಂದಿಸಿದ್ದು, ದಾವಣಗೆರೆ, ಉಡುಪಿಯ ಜಿಲ್ಲಾ ಪಂಚಾಯತ್ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗಿದೆ. ಶಿವಮೊಗ್ಗ, ಮಂಡ್ಯ, ಹಾಸನ, ಚಿಕ್ಕಮಗಳೂರು, ಕೋಲಾರ ಮತ್ತಿತ್ತರ ಜಿಲ್ಲೆಗಳಲ್ಲಿ ಜಿಲ್ಲಾ ಪಂಚಾಯತ್ ಆಡಳಿತವು ಸದ್ಯದಲ್ಲೇ ನಿರ್ಣಯ ಕೈಗೊಳ್ಳಲಿದೆ . ಉಳಿದ ಜಿಲ್ಲೆಗಳೂ ಈ ಅಭಿಯಾನಕ್ಕೆ ಸಕಾರತ್ಮಕವಾಗಿ ಸ್ಪಂದಿಸಿದೆ.
ಬರಗಾಲ, ಅರ್ಥಿಕ ಮುಗ್ಗಟ್ಟಿನಿಂದ ಕೃಷಿಕ ಈಗ ಕಂಗೆಟ್ಟಿದ್ದಾನೆ. ಈ ಹಿನ್ನೆಲೆಯಲ್ಲಿ ನಮ್ಮ ದೇಶದಲ್ಲಿ ಬೇಸಾಯ ಮಾಡುವವರ ಸಂಖ್ಯೆ ಇಳಿಕೆಯಾಗುತ್ತಿದೆ. ಕೃಷಿಕರು ಬೇಸತ್ತು ತಮ್ಮ ಕೃಷಿ ಭೂಮಿಯನ್ನು ಮಾರುವ ಯೋಚನೆ ಮಾಡುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಗಮನಿಸಿದರೆ ಮುಂದೊಂದು ದಿನ ದೇಶದಲ್ಲಿ ಅನ್ನ ಕ್ಷಾಮ ಕಾಣಿಸಿಕೊಂಡರೆ ಅಚ್ಚರಿಯೇನಲ್ಲ.

'ಅಕ್ಕಿ’ ಉಳಿದರೇ ಇಂದಲ್ಲ ನಾಳೆ ತಿನ್ನಬಹುದು. ಆದರೇ ‘ಅನ್ನ’ ಉಳಿದರೆ ? ಅದು ನಾಶವೇ ಸರಿ. ಹೀಗಾಗಿ ಅನ್ನದ ಅಪವ್ಯಯ ತಪ್ಪಿಸುವ ನಿಟ್ಟಿನಲ್ಲಿ ಕುಶಾಲನಗರದಿಂದ ಆರಂಭವಾದ ಆಹಾರ ಸಂರಕ್ಷಣಾ ಅಭಿಯಾನ ಈಗ ರಾಜ್ಯಾದ್ಯಂತ ಪಸರಿಸುತ್ತಿದೆ. ಈ ಅಭಿಯಾನಕ್ಕೆ ಪ್ರತಿಯೊಬ್ಬ ಭಾರತೀಯನು ಕೈ ಜೋಡಿಸಬೇಕಾಗಿದೆ...

 

Author : ಅಶ್ವತ್ ಸಂಪಾಜೆ 

Readers' Comments (0)
Select Language : 
Press F12 to toggle Indian language and English
Your Name : 
Characters Remaining: 5000
 
 
Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited