Untitled Document
Sign Up | Login    
ನಷ್ಟದ ಭಯದಲ್ಲಿ ಕನ್ನಡ ಚಿತ್ರರಂಗ


ಕನ್ನಡದ ಚಿತ್ರಗಳು ಕರ್ನಾಟಕದಲ್ಲಿಯೇ ಕಡೆಗಣಿಸಲ್ಪಡುತ್ತಿವೆ ಎಂಬುದು ಹಲವರ ಅಭಿಪ್ರಾಯ. ಅದು ನಿಜವೂ ಹೌದು. ಪರಭಾಷಾ ಚಿತ್ರಗಳನ್ನು ಕರ್ನಾಟಕದಲ್ಲಿ ಬಿಡುಗಡೆ ಮಾಡುವಾಗ, ತಣ್ಣಗೆ ಅವುಗಳ ವಿತರಣೆಯ ಹೊಣೆಹೊತ್ತು, ಕನ್ನಡದ ಚಿತ್ರಗಳಿಗಿಂತಲೂ ಹೆಚ್ಚಿನ ಹೊರೆ ಹೊತ್ತು, ಅದಕ್ಕೆ ಹೆಚ್ಚಿನ ಪ್ರಾಮುಖ್ಯತೆ ಮತ್ತು ಪ್ರಚಾರ ನೀಡಿ, ರಿಲೀಸ್ ಮಾಡಿಸಿ, ಓಡಿಸುವವರು ಕನ್ನಡ ನಾಡಿನ ಚಿತ್ರಮಂದಿರಗಳ ಒಡೆಯರು. ಜೇಬು ತುಂಬಿ, ಅದರ ಬಿಸಿ ಕಮ್ಮಿಯಾದ ತಕ್ಷಣ, ಕನ್ನಡದ ಚಿತ್ರಗಳ ಕಡೆ ಕಣ್ಣು ಹಾಯಿಸುವ ರೂಢಿ ಅವರದು. ಆನಂತರ ಕನ್ನಡ ನಮ್ಮ ಭಾಷೆ, ನಾವು ಡಬ್ಬಿಂಗ್ ವಿರೋಧಿಗಳು, ರಿಮೇಕ್ ವಿರೋಧಿಗಳು, ಎಂದೆಲ್ಲಾ ಘೋಷಣೆ ಕೂಗುತ್ತಾ.. ಮತ್ತೆ ಸುದ್ದಿಗೆ ಬರುವುದು ಅವರ ಜಾಯಮಾನ.

ಇದು ಇಂದು ನಿನ್ನೆಯ ವಿಚಾರವಲ್ಲ, ಹಲವು ವರ್ಷಗಳಿಂದ ನಡೆದುಕೊಂಡು ಬರುತ್ತಾ ಇರುವ ಪ್ರಕ್ರಿಯೆ. ನೆರೆ ರಾಜ್ಯಗಳಿಗೆ ಹೋಲಿಸಿದರೆ ಕನ್ನಡಿಗರಿಗೆ ಕನ್ನಡಾಭಿಮಾನ ಬಹಳ ಕಡಿಮೆ ಅನ್ನುವ ವಿಚಾರ ಹಲವು ವಿಷಯಗಳಲ್ಲಿ ಸಾಬೀತಾಗಿದೆ. ಇದು ಹೀಗೆಯೇ ಮುಂದುವರೆದರೆ ಕನ್ನಡ ಎಂಬ ಭಾಷೆಯೊಂದು ಕರ್ನಾಟಕದಲ್ಲಿತ್ತು ಎಂದು ಕಥೆ ಹೇಳುವ ಸಂದರ್ಭವೂ ಮುಂದೊಂದು ದಿನ ಬರಲೂ ಬಹುದು.
ಹಿಂದೆ ಕನ್ನಡ ಭಾಷಾ ಚಿತ್ರ ಬಿಡುಗಡೆಯ ಸಂದರ್ಭದಲ್ಲಿ ಬೇರೆ ಯಾವ ಭಾಷೆಯ ಸಿನಿಮಾಗಳೂ ಕರ್ನಾಟಕದಲ್ಲಿ ತೆರೆ ಕಾಣುತ್ತಿರಲಿಲ್ಲ. ಕನ್ನಡ ಚಿತ್ರರಂಗದ ಈ ನಿಯಮವನ್ನು ಅರಿತು, ತಮ್ಮ ರಾಜ್ಯದಲ್ಲಿಯೂ ಇದನ್ನು ಅಳವಡಿಸಿಕೊಳ್ಳುವುದಕ್ಕಾಗಿ ಆಂಧ್ರ, ತಮಿಳುನಾಡಿನಿಂದ ನಿರ್ಮಾಪಕರ ಕಡೆಯವರು ಬರುತ್ತಿದ್ದ ಸಂದರ್ಭವೂ ಒಂದಿತ್ತು. ಆದರೆ ಇಂದು ಪರಿಸ್ಥಿತಿ ಹೇಗಿದೆ ಅಂದರೆ, ಪರಭಾಷಾ ಚಿತ್ರಗಳು ಬಿಡುಗಡೆಯಾಗುವ ಸಮಯದಲ್ಲಿ ಕನ್ನಡದ ಚಿತ್ರಗಳು ಬಿಡುಗಡೆಯಾಗುವುದೇ ಇಲ್ಲ. ಪರಭಾಷೆಯ ಚಿತ್ರದೊಂದಿಗೆ ತಮ್ಮ ಚಿತ್ರ ಪೈಪೋಟಿ ನೀಡದೇ ಸೋಲು ಅನುಭವಿಸಿಬಿಡುತ್ತೆ ಅನ್ನುವ ಭಯದಿಂದ ಬಿಡುಗಡೆ ಮಾಡಲು ನಿರ್ಮಾಪಕರೇ ಹೆದರುವ ಸ್ಥಿತಿ ಬಂದಿದೆ.

ಬೇರೆ ಭಾಷೆಯ ಚಿತ್ರಗಳಿಗೆ ಮಣೆ ಹಾಕಿ, ಅವರಿಗಾಗಿ ಚಿತ್ರಮಂದಿರಗಳು ಹಾಗೂ ದಿನಾಂಕಗಳನ್ನು ಮೀಸಲಿಡುವ ಕನ್ನಡದ ವಿತರಕರು, ಕನ್ನಡದ ಸಿನಿಮಾಗಳಿಗೆ ಈ ರೀತಿಯ ತಯಾರಿ ಮಾಡುತ್ತಾರೆಯೇ ಅನ್ನುವ ಪ್ರಶ್ನೆಯೂ ಇದೆ.

ಪರಭಾಷಾ ಪ್ರಿಯರಾದ ವಿತರಕರು, ಕನ್ನಡ ಸಿನಿಮಾ ನಿರ್ಮಾಪಕರ ಮೂಗಿಗೆ ಬೆಣ್ಣೆ ಹಚ್ಚಿ, ಭಯಪಡಿಸಿ ಟಾಕೀಸ್‌ಗಳನ್ನು ಬೇರೆ ಭಾಷೆಗಳಿಗೆ ಕೊಟ್ಟು ದುಡ್ಡು ಮಾಡಿಕೊಳ್ಳುತ್ತಾರೆ. ಕನ್ನಡ ಸಿನಿಮಾಗಳು ಮೊದಲೇ ಲಾಭದಲ್ಲಿ ಹಿಂದೆ ಬಿದ್ದಿರುವ ಕಾರಣ, ವಿತರಕರ ಮಾತನ್ನು ನಂಬಿ ತಮ್ಮ ಸಿನಿಮಾದ ಬಿಡುಗಡೆಯನ್ನು ಮುಂದೆ ಹಾಕುತ್ತಾರೆ. ಹಾಗೆ ಬಿಡುಗಡೆ ದಿನಾಂಕ ಮುಂದೂಡಲ್ಪಟ್ಟ ಎಷ್ಟೋ ಕನ್ನಡ ಸಿನಿಮಾಗಳು ಬಿಡುಗಡೆಯ ಭಾಗ್ಯವನ್ನೇ ಕಾಣದೆ, ನಿರ್ಮಾಪಕ ತೀವ್ರ ಸಂಕಷ್ಟ ಅನುಭವಿಸಿದ ಎಷ್ಟೋ ಉದಾಹರಣೆಗಳು ನಮ್ಮ ಮುಂದಿವೆ. ಕೆಲವು ಲೋ ಬಜೆಟ್ ಕನ್ನಡ ನಿರ್ಮಾಪಕರು ಇಂಥ ಮೋಸವನ್ನು ತಡೆಯುವ ಶಕ್ತಿಯಿಲ್ಲದೆ, ಕನ್ನಡದ ಬಿಗ್ ಬಜೆಟ್ ಸಿನಿಮಾದೊಂದಿಗೂ ಪೈಪೋಟಿ ಕೊಡಲಾಗದೆ, ಸಿಕ್ಕ ದಿನಾಂಕದೊಂದು ರಿಲೀಸ್ ಮಾಡಿ ಕೈ ಸುಟ್ಟುಕೊಂಡಿದ್ದಾರೆ.
ಕನ್ನಡದ ಚಿತ್ರಗಳು ತೆರೆಕಂಡಿವೆ ಎಂದು ಪ್ರೇಕ್ಷಕರಿಗೆ ಗೊತ್ತಾಗದಷ್ಟರ ಮಟ್ಟಿಗೆ, ಮೀಡಿಯಾ ಪ್ರಚಾರಗಳು ಗಗನ ಮುಟ್ಟಿರುತ್ತವೆ. ನಮ್ಮ ರಾಜ್ಯದ ತುಂಬೆಲ್ಲ ಬೇರೆ ಭಾಷೆಯ ಪೋಸ್ಟರ್‌ಗಳೇ ರಾರಾಜಿಸುತ್ತಿರುತ್ತವೆ. ನಮ್ಮ ಕನ್ನಡ ನ್ಯೂಸ್ ಚಾನಲ್‌ಗಳೂ ಕೂಡ, ಕನ್ನಡ ಭಾಷೆಯ ಸಿನಿಮಾವನ್ನು ಪ್ರಮೋಟ್ ಮಾಡುವುದಕ್ಕಿಂತ ಹೆಚ್ಚಾಗಿ, ಬೇರೆ ಭಾಷೆಯ ಚಿತ್ರವನ್ನು ಪ್ರಮೋಟ್ ಮಾಡುತ್ತವೆ. ಪರಭಾಷೆಯ ಚಿತ್ರಕ್ಕೇ ಪ್ರೇಕ್ಷಕ ಅಂಟಿಕೊಂಡಿರುವಾಗ ಟಿ.ಆರ್‌.ಪಿಗಾಗಿ ಕೆಲಸಮಾಡುವ ಸುದ್ದಿ ವಾಹಿನಿಯವರಾದರೂ ಮತ್ತೇನು ಮಾಡಿಯಾರು...?

ಹೀಗಾಗಿ, ಸಣ್ಣ ಬಜೆಟ್‌ನ ಚಿತ್ರಗಳೆಲ್ಲ ಪುಟ್ಟದೊಂದು ಸದ್ದೂ ಮಾಡದೇ ಮಾಯವಾಗಿ ಹೋಗುತ್ತವೆ. ಮುಂದೊಂದು ದಿನ ಅದೇ ಚಿತ್ರಗಳು ಟಿ.ವಿ ಪರದೆಯಲ್ಲಿ ಬಂದಾಗ, ಇಷ್ಟು ಚೆನ್ನಾಗಿರುವ ಚಿತ್ರ ಚಿತ್ರಮಂದಿರದಲ್ಲಿ ಯಾಕೆ ಓಡಿಲ್ಲ.. ಎಂದು ಪ್ರೇಕ್ಷಕ ಮನಸ್ಸಿನಲ್ಲೇ ಪ್ರಶ್ನಿಸಿಕೊಳ್ಳುತ್ತಾನೆ. ಹೀಗೆ, ಒಂದು ಕಡೆ ಚಿಕ್ಕ ಸಿನಿಮಾದವರು ಮಣ್ಣಾದರೆ, ದೊಡ್ಡ ಬಜೆಟ್ ಸಿನಿಮಾದವರಿಗೂ ಕೂಡ ಪರಭಾಷೆಯ ಚಿತ್ರದ ಬಗ್ಗೆ ಭಯ ಕಾಡದೇ ಇರದು.

ಅವರಿಗೆ ಬೇರೆ ಭಾಷೆಯ ಅತೀ ದೊಡ್ಡ ಬಜೆಟ್ ಮತ್ತು ದೊಡ್ಡ ದೊಡ್ಡ ನಟರ ಭಯ ಕಾಡುತ್ತಿರುತ್ತದೆ. ಅವರ ಎದುರು ನಮ್ಮ ನಟರ ಮಾರ್ಕೆಟ್ ಕಮ್ಮಿ ಇರುವುದುರಿಂದ, ಹಾಗು ಕನ್ನಡ ನಟರ ಅಭಿಮಾನಿಗಳೇ, ಬೇರೆ ಭಾಷೆಯ ನಟರ ಅಭಿಮಾನಿಗಳಾಗಿರುವುದರಿಂದ, ಎಲ್ಲಿ ಅಭಿಮಾನಿಗಳು ಡಿವೈಡ್ ಆಗುತ್ತಾರೋ..? ಎಂದು ಬಿಡುಗಡೆಗೆ ಹಿಂಜರಿಯುತ್ತಾರೆ.

ಹಿಂದೆಲ್ಲಾ ಚಿತ್ರ ಬಿಡುಗಡೆಗೆ 30 ಚಿತ್ರಮಂದಿರವೆಂದರೆ ಹೆಚ್ಚಿನದಾಗಿತ್ತು, ಅಲ್ಲಿ 100 ದಿನಗಳು 50 ದಿನಗಳು ಸಿನಿಮಾ ಓಡಿದರೆ ಹಾಕಿದ ಹಣ ವಾಪಾಸ್‌ ಬರುತ್ತಿತ್ತು. ಆದರೆ ಇಂದಿನ ಸ್ಟಾಟರ್ಜಿಯೇ ಬೇರೆಯಾಗಿದೆ. 100,130 ಚಿತ್ರಮಂದಿರಗಳಲ್ಲಿ ಚಿತ್ರ ಬಿಡುಗಡೆ ಮಾಡಿ, ಕೆಲವಾರು ದಿನಗಳಲ್ಲೇ ಹಣಬಾಚಿಕೊಳ್ಳುತ್ತಾರೆ, ಇದಲ್ಲದೆ... ಟಿ.ವಿ ರೈಟ್ಸ್, ಸ್ಯಾಟ್ಲೈಟ್ ರೈಟ್ಸ್, ಡಬ್ಬಿಂಗ್ ರೈಟ್ಸ್, ರೀಮೇಕ್ ರೈಟ್ಸ್, ಹೀಗೆಲ್ಲಾ ಹಲವಾರು ಮೂಲಗಳಿಂದ ಹಣವನ್ನು ಹಿಂದೆ ಪಡೆಯುತ್ತಾರೆ. ಕೆಲವು ಬುದ್ದಿವಂತರು ಸರ್ಕಾರದಿಂದ ಸಬ್ಸಿಡಿಯನ್ನು ಪಡೆದು ಹಣಮಾಡುತ್ತಾರೆ.
ನೆರೆಯ ರಾಜ್ಯಗಳಿಗೆ ಹೋಲಿಸಿದರೆ ಕರ್ನಾಟಕದಲ್ಲಿರುವ ಚಿತ್ರ ಮಂದಿರಗಳ ಸಂಖ್ಯೆ ತುಂಬಾ ಕಡಿಮೆ. ಅದರಲ್ಲೂ ಕನ್ನಡ ಚಿತ್ರ ಪ್ರದರ್ಶನವಾಗುವ ಚಿತ್ರ ಮಂದಿರಗಳು ತುಂಬಾ ಕಡಿಮೆ ಸಂಖ್ಯೆಯಲ್ಲಿದೆ. ಕೇವಲ ಬೆಂಗಳೂರೊಂದರಲ್ಲೇ ಬೇರೆ ಭಾಷೆಯ ಸಿನಿಮಾಗಳಿಗೆ 90 ಚಿತ್ರಮಂದಿರವನ್ನು ಕೊಡಲಾಗುತ್ತಿದೆ. ಆದರೆ ಕನ್ನಡ ಸಿನಿಮಾವನ್ನು ಬೇರೆ ರಾಜ್ಯಗಳಲ್ಲಿ ಒಂದೆರಡು ಟಾಕೀಸ್‌ನಲ್ಲಿ ರಿಲೀಸ್ ಮಾಡಿದರೂ ನೋಡಲು ಜನರಿರುವುದಿಲ್ಲ. ನಮ್ಮಲ್ಲಿ ಹಾಗಲ್ಲ, ನಮ್ಮ ಸಿನಿಮಾಗಳಿಗಿಂತ ಬೇರೆ ಸಿನಿಮಾಗಳನ್ನೇ ಹೆಚ್ಚಾಗಿ ಜನರು ಇಷ್ಟಪಡುತ್ತಾರೆ.

ನಿಖರವಾದ ಅಂಕಿ ಅಂಶಗಳಿಲ್ಲವಾದರೂ, ಒಂದು ಅಂದಾಜಿನ ಮೇಲೆ ಹಿಂದಿನ ವಾರ ಬೆಂಗಳೂರು ಹಾಗು ಸುತ್ತಮುತ್ತಲಿನಲ್ಲಿ, ತೆಲುಗಿನ ಚಿತ್ರಗಳಾದ 'ನಾಯಕ' 36 ಟಾಕೀಸ್‌ಗಳಲ್ಲಿ , 'ಸೀತಮ್ಮ ವಾಕಿಟ್ಲೋ ಸಿರಿಮಲ್ಲೆಚೆಟ್ಟು' 26 ಟಾಕೀಸ್ಗಳಲ್ಲಿ, ತಮಿಳಿನ 'ಅಲೆಕ್ಸ್ ಪಾಂಡಿಯನ್' 25 ಟಾಕೀಸ್‌ಗಳಲ್ಲಿ, 'ಕಣ್ಣ ಲಡ್ಡುತಿನ್ನ ಆಸೆಯಾ..?' 12 ಚಿತ್ರಮಂದಿರಗಳಲ್ಲಿ ರಿಲೀಸ್ ಆಗಿದೆ. ಇದಲ್ಲದೆ ಹಿಂದಿನ ವಾರ ರಿಲೀಸ್ ಆಗಿದ್ದ ಚಿತ್ರಗಳೂ ಕೆಲವಾರು ಪ್ರದರ್ಶನ ನಡೆಸುತ್ತಿರುವುದರಿಂದ, ಕನ್ನಡ ಸಿನಿಮಾಗಳನ್ನು ನೋಡಲು ಜನರೆಲ್ಲಿ ಬಂದಾರು..?

ಭಾಷೆಯ ಮೇಲಿನ ಅಭಿಮಾನ ಹಾಗೂ ಉತ್ತಮ ಚಿತ್ರಗಳು ಬಂದರೆ, ಬೇರೆ ಭಾಷೆಯ ಯಾವುದೇ ಚಿತ್ರ ರಿಲೀಸಾದರೂ ಕನ್ನಡ ಸಿನಿಮಾ ನೋಡಲು ಜನರು ಬಂದೇ ಬರುತ್ತಾರೆ ಎಂಬುದು ಕೆಲವರ ಅಭಿಪ್ರಾಯ. ಹಾಗೆಂದ ಮಾತ್ರಕ್ಕೆ ಕನ್ನಡದಲ್ಲಿ ಉತ್ತಮ ಚಿತ್ರಗಳಿಗೇನೂ ಕಮ್ಮಿ ಇಲ್ಲ. ಆದರೆ ಅವುಗಳು ಪರಭಾಷಾ ಚಿತ್ರಗಳೊಂದಿಗೆ ಪೈಪೋಟಿಗೆ ಇಳಿಯಲು ಸಿದ್ದವಿಲ್ಲ, ಇಳಿದರೂ ಸೋಲಬೇಕಾದ ಪರಿಸ್ಥಿತಿ ನಮ್ಮವರೆ ತಂದಿಟ್ಟುಕೊಂಡಿದ್ದಾರೆ. ಕಾರಣ - ಚಿತ್ರಮಂದಿರಗಳ ಅಭಾವ. ಅತೀ ದೊಡ್ಡ ಬಜೆಟ್ ಸಿನಿಮಾಗಳೆಂದು ಹೇಳಿಕೊಳ್ಳುವ ಶಿವಣ್ಣ ಅಭಿನಯದ ‘ಲಕ್ಷ್ಮಿ’ ಹಾಗೂ ಸುದೀಪ್, ಚಿರಂಜೀವಿ, ಸರ್ಜ ಅಭಿನಯದ ‘ವರದನಾಯಕ’, ತಮ್ಮ ತಮ್ಮಲೇ ಪೈಪೋಟಿ ಏಕೆ ಎಂದು, ಪರಸ್ಪರ ಮಾತನಾಡಿಕೊಂಡು ರಿಲೀಸ್ ದಿನಾಂಕವನ್ನು ಬೇರೆ ದಿನಗಳಿಗೆ ಮುಂದೆ ಹಾಕಿಕೊಂಡಿದ್ದಾರೆ. ಆದರೆ ಈ ಎರಡು ಚಿತ್ರ ತಂಡದವರೂ ಬೇರೆ ಭಾಷೆಯ ಚಿತ್ರಗಳಿಗೆ ಅವಕಾಶ ಇಲ್ಲದಂತೆ ಚಿತ್ರ ಮಂದಿರವನ್ನು ಬುಕ್‌ ಮಾಡಿಸಿಕೊಂಡು ತಮ್ಮ ತಮ್ಮಲೇ ಹಣ ಉಳಿಯುವ ರೀತಿ ಮಾಡಬಹುದಾಗಿತ್ತು. ಬೇರೆಯಾರಿಗೋ ಹಣ ಹೋಗುವುದನ್ನು ತಡೆಯಬಹುದಾಗಿತ್ತು. ಆದರೆ ಮಾಡಿಲ್ಲ.
ಒಟ್ಟಾರೆ ಇಲ್ಲಿ ಪಕ್ಕಾ ಬಿಸಿನೆಸ್ ನಡೆಯುತ್ತಿದೆ ಎಂಬುದು ಕನ್ನಡ ಸಿನಿಮಾ ಅಭಿಮಾನಿಗಳ ಅಭಿಪ್ರಾಯ. ಹೆಸರು ಮಾಡಿರುವವರು ಕ್ರಿಯಾತ್ಮಕವಾಗಿ ಕೆಲಸ ಮಾಡುವುದಿಲ್ಲ. ಹೆಸರಿಲ್ಲದವರು ಬಡಾಯಿ ಮಾತಾಡುವುದು ಬಿಡುವುದಿಲ್ಲ. ತಣ್ಣಗಿರುವವರು ಇದೆಲ್ಲಾ ನಮ್ಮದಲ್ಲ ಎಂದು, ತಮ್ಮ ಪಾಡಿಗೆ, ತಮ್ಮ ಚಿತ್ರ ಬಿಡುಗಡೆಮಾಡಿಕೊಂಡು ಹಣ ಮಾಡಿಕೊಂಡು ಸುಮ್ಮನೆ ಕೂತಿರುತ್ತಾರೆ. ಕನ್ನಡ ಚಿತ್ರರಂಗದ ಉಳಿವಿಗಾಗಿ ಮತ್ತು ಅಭಿವೃದ್ಧಿಗಾಗಿ ಯಾರೂ ಪ್ರಯತ್ನಿಸುವುದಿಲ್ಲ.

ವರನಟ ಡಾ.ರಾಜ್ ಕುಮಾರ್‌ರವರು ಅಂದು ನನ್ನ ಕ್ಷೇತ್ರ ಅಲ್ಲ ಎಂದು, ಗೋಕಾಕ್ ಚಳುವಳಿಯಲ್ಲಿ ಇಳಿಯದಿದ್ದರೆ, ಅಷ್ಟು ಜನ ಸೇರುತ್ತಲೇ ಇರಲಿಲ್ಲ. ಚಳುವಳಿ ಆಗುತ್ತಿರಲೇ ಇಲ್ಲ. ಅವರ ಸಿನಿಮಾಗಳನ್ನು ನೋಡಿ ಬೆಳೆದವರು ನಾವು, ಅವರ ಸಿನಿಮಾಗಳಿಂದ, ಅವರ ನಡವಳಿಕೆಗಳಲ್ಲಿ ಕೆಲವನ್ನಾದರು ಅನುಸರಿಸಿದರೆ, ಕನ್ನಡ ಮತ್ತು ಕರ್ನಾಟಕ ಚಿತ್ರರಂಗ ಮತ್ತೆ ಹಿಂದಿನ ಚಿನ್ನದ ದಿನಗಳನ್ನು ನೋಡುವುದರಲ್ಲಿ ಅನುಮಾನವಿಲ್ಲ.

 

Author : ನಟರಾಜ 

Readers' Comments (0)
Select Language : 
Press F12 to toggle Indian language and English
Your Name : 
Characters Remaining: 5000
 
 
Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited