Untitled Document
Sign Up | Login    
ರಾಮಾಯಣ
ಅವತಾರವೆತ್ತಲು ಕಾರಣ
ಶ್ರೀ ರಾಮ

ಯದಾ ಯದಾಹಿ ಧರ್ಮಸ್ಯ ಗ್ಲಾನಿರ್ಭವತಿ ಭಾರತ |
ಅಭ್ಯುತ್ಥಾನಮಧರ್ಮಸ್ಯ ತದಾತ್ಮಾನಂ ಸೃಜಾಮ್ಯಹಮ್|| (ಭಗವದ್ಗೀತಾ 4-7)
ಪರಿತ್ರಾಣಾಯ ಸಾಧೂನಾಂ ವಿನಾಶಾಯಚ ದುಷ್ಕೃತಾಮ್|
ಧರ್ಮಸಂಸ್ಥಾಪನಾರ್ಥಾಯ ಸಂಭವಾಮಿ ಯುಗೇ ಯುಗೇ|| (ಭಗವದ್ಗೀತಾ 4-8)

'ಅರ್ಜುನ, ಯಾವಾಗ ಧರ್ಮದ ಗ್ಲಾನಿಯಾಗುತ್ತದೆಯೊ , ಅಧi ವೃದ್ಧಿಯಾಗುತ್ತದೆಯೋ ಆಗ ನಾನು ಅವತಾರ ಮಾಡುತ್ತೇನೆ. ಸಜ್ಜನರ ರಕ್ಷಣೆಗಾಗಿಯೂ ದುರ್ಜನರ ಸಂಹಾರಕ್ಕಾಗಿಯೂ, ಪ್ರಪಂಚದಲ್ಲಿ ಧರ್ಮವನ್ನು ಸಂಸ್ಥಾಪನೆ ಮಾಡುವುದಕ್ಕಾಗಿಯೂ ಯುಗಯುಗದಲ್ಲಿಯೂ ಅವತರಿಸುತ್ತೇನೆ', ಎಂಬ ಭಗವಂತನ ನುಡಿಯಂತೆ, ಲೋಕದಲ್ಲಿ ಅಧರ್ಮ ಹೆಚ್ಚಿ, ದುಷ್ಟರು ಸಜ್ಜನರು, ದುರ್ಬಲರು ಅಬಲೆಯರು ವ ಮಕ್ಕಳಾದಿಯಾಗಿ ಜನ ಸಾಮಾನ್ಯರಿಗೆ ಉಪಟಳ ಕೊಡುತ್ತ, ಪೀಡಿಸುತ್ತ ಬದುಕನ್ನು ಅಸಹನೀಯವಾಗಿಸುತ್ತಿರುವಾಗ, ಇಡೀ ಸೃಷ್ಟಿಯೇ ಅತ್ಯಾಚಾರಕ್ಕೆ ಒಳಗಾಗಿ ಪರಿಸ್ಥಿತಿ ದುರ್ಭರವಾಗಿರುವಾಗ ಸಂಕಟವನ್ನು ನಿವಾರಣೆ ಮಾಡಿ, ಸುಖ ಸಂತೋಷ ನೆಲೆಗೊಳ್ಳುವಂತೆ ಮಾಡಲು ಭಗವಂತನು ಅವತಾರವೆತ್ತಿ ಬರುತ್ತಾನೆ.

'ಏಕಂ ಹಿ ಸತ್ ವಿಪ್ರಾಃ ಬಹುಧಾ ವದಂತಿ' ಎಂಬ ವೇದವಾಕ್ಯವೂ 'ಬ್ರಹ್ಮವೊಂದೇ ಸತ್ಯ ಜಗತ್ತೆಲ್ಲ ಮಿಥ್ಯ' ಎಂಬ ಆಚಾರ್ಯರ ಮಾತೂ 'ದೇವನೊಬ್ಬ್ಬ ನಾಮ ಹಲವು' ಎಂಬ ಬಸವಣ್ಣನವರ ನುಡಿಯೂ, ಪರಮಾತ್ಮನು ಒಬ್ಬನೆ ಎಂದು ಸಾರುತ್ತವೆ. 'ಏಕೋ ದೇವಃ ಸರ್ವಭೂತೇಷು ಗೂಢಃ ಸರ್ವವ್ಯಾಪೀ ಸರ್ವ ಭೂತಾಂತರಾತ್ಮಾ', ಎಂದು ಭಗವಂತನ ಶಕ್ತಿಯ ಬಗ್ಗೆ ಕೊಂಡಾಡಲಾಗಿದೆ.

'ಅವರವರ ಭಾವಕ್ಕೆ ಅವರವರ ಭಕುತಿಗೆ, ಅವರವರ ತೆರನಾಗಿ, ಇರುತಿಹನು ಶಿವಯೋಗಿ' ಎಂದು ನಿಜಗುಣ ಶಿವಯೋಗಿಗಳು ಸಾರುತ್ತಾರೆ. ದೇವರು ಒಬ್ಬನೇ. ಬೇರೆ ಬೇರೆ ತೆರನಾಗಿ ಭಕ್ತ ಆರಾಧಿಸುತ್ತಾನೆ..ಜನರು ಕಾಣುತ್ತಾರೆ. ಅವರವರಿಗೆ ಇಷ್ಟದ ರೂಪದಲ್ಲಿ ಅವನು ಕಾಣುತ್ತಾನೆ. ಆದ್ದರಿಂದ ಅವತಾರ ಯಾವುದೇ ಇದ್ದರೂ, ಹೆಸರು ಹಲವು ವಿಧ ಇದ್ದರೂ, ಎಲ್ಲ ನದಿಗಳೂ ಸಮುದ್ರವನ್ನೇ ಸೇರುವಂತೆ ಯಾರನ್ನು ಪೂಜೆ ಮಾಡಿದರೂ ಆರಾಧಿಸಿದರೂ ಒಬ್ಬನೇ ಆದ ಆ ಭಗವಂತನನ್ನೇ ಸೇರುತ್ತದೆ.

ಸರ್ವತಂತ್ರ ಸ್ವತಂತ್ರನೂ, ಭಕ್ತಪರಾಧೀನನೂ, ಸ್ವಯಂ ಪ್ರಕಾಶನೂ, ಅಣುರೇಣು ತೃಣಕಾಷ್ಠಗಳಲ್ಲಿ ವಾಸವಾಗಿರುವವನೂ ಆದ ಪರಮಾತ್ಮನು ಅನೇಕ ಅವತಾರಗಳನ್ನು ಎತ್ತಿಯೂ ಎಲ್ಲದರಿಂದಲೂ ಮುಕ್ತನಾಗಿದ್ದಾನೆ.

ವಿಷ್ಣು ಎಂದರೆ ಸರ್ವವ್ಯಾಪಿ.(ವಿಷಲೃ ವ್ಯಾಪ್ತೌ) ಅಗೋಚರನಾದ ಅವನಿಂದಲ್ಲದೇ ಒಂದು ಹುಲ್ಲುಕಡ್ಡಿಯೂ ಚಲಿಸುವುದಿಲ್ಲ. (ತೇನ ವಿನಾ ತೃಣಮಪಿ ನಚಲತಿ) ಜಗದೀಶ್ವರನಾದ ಆತ ಪ್ರಜಾವತ್ಸಲನೂ ಕರುಣಾಳುವೂ ಆಗಿದ್ದಾನೆ. ಅವನೇ ಪರಮಾತ್ಮನೂ ಪರಮೇಶ್ವರನೂ ಆಗಿದ್ದಾನೆ. ಆತನ ಇಚ್ಛೆಯಂತೆಯೇ ಈ ಬ್ರಹ್ಮಾಂಡದ ಸೃಷ್ಟಿಯಾಯಿತು. ಮೊದಲು ಆಕಾಶ, ಅನಂತರ ವಾಯು ಅದರಿಂದ ಅಗ್ನಿ, ಅಗ್ನಿಯಿಂದ ನೀರು, ನೀರಿನಿಂದ ಭೂಮಿ, ಭೂಮಿಯಿಂದ ವನಸ್ಪತಿ-ಸಸ್ಯ, ಸಸ್ಯದಿಂದ ಅನ್ನ..ಹೀಗೆ ಸೃಷ್ಟಿಯಾಯಿತು.

(ಬ್ರಹ್ಮಣಾ ವಿಪಶ್ಚಿತೇತಿ | ತಸ್ಮಾದ್ವಾ ಏತಸ್ಮಾದಾತ್ಮಾನಂ ಆಕಾಶಃ ಸಂಭೂತಃ | ಆಕಾಶಾದ್ವಾಯುಃ| ವಾಯೋರಗ್ನಿಃ| ಅಗ್ನೇರಾಪಃ| ಅದ್ಭ್ಯಃ ಪೃಥಿವೀ | ಪೃಥಿವ್ಯಾ ಓಷಧಯಃ | ಓಷಧೀಭ್ಯೋನ್ನಮ್.. |ಇತ್ಯಾದಿ-ತೈತ್ತರೀಯೋಪನಿಷತ್ ಪ್ರ.ಪಾ.೨)

ಭೂಮಿ ಹಾಗೂ ನೀರಿನಲ್ಲಿ ಮೊದಲು ವನಸ್ಪತಿಗಳು ಹುಟ್ಟಿದವು. ಅನಂತರ ಕ್ರಿಮಿ-ಕೀಟ, ಸರೀಸೃಪ,ಪಶುಪಕ್ಷಿ, ಮಾನವನ ವರೆಗೆ ಅನಂತ ಜೀವರಾಶಿ ನಿರ್ಮಾಣವಾಯಿತು. ಈ ಜಗತ್ತಿನಲ್ಲಿ ಅನಂತ ಕೋಟಿ ಜೀವಜಾತಗಳಿವೆ. ಭೂಮಿ, ನೀರು, ಗಾಳಿ ಈ ಮೂರು ಇರುವ ಲೋಕವನ್ನು 'ತ್ರಿಲೋಕ' ಎಂದು ಕರೆಯಲಾಗಿದೆ. ಹೀಗೆ ಲೀಲೆಗಾಗಿ ಜಗತ್ತನ್ನು ಸೃಷ್ಟಿಸಿದ್ದಾನೆ ಮತ್ತು ಸಕಲ ಲೋಕಗಳಲ್ಲಿಯೂ ಪರಮಾತ್ಮ ಆವಾಸ ಹೊಂದಿದ್ದಾನೆ ('ಈಶಾವಾಸ್ಯಮಿದಂ ಸರ್ವಂ' )ಎಂದು ಉಪನಿಷತ್ತಿನಲ್ಲಿ ಸುಂದರವಾಗಿ ವರ್ಣಿಸಲಾಗಿದೆ. ಆದುದರಿಂದ ಇಡೀ ಜಗತ್ತನ್ನು ವ್ಯಾಪಿಸಿಕೊಂಡಿರುವ ಮತ್ತು ನಿಯಂತ್ರಿಸುವ ಸರ್ವಶಕ್ತನಾದ (ಸುಪ್ರೀಂ ಪವರ್) 'ಒಬ್ಬನೇ ದೇವರು' ಇರುತ್ತಿದ್ದು, ಅನೇಕ ಅವತಾರಗಳ ಮೂಲಕ ವ್ಯವಸ್ಥೆಯನ್ನು ಕೈಗೊಂಡಿದ್ದಾನೆ ಹಾಗೂ ಸೃಷ್ಟಿ ಸ್ಥಿತಿ ಲಯಗಳಿಗೆ ಕಾರಣನಾಗಿದ್ದಾನೆ ಎಂದು ಭಾಗವತ, ಸ್ಕಂದಪುರಾಣ ಮೊದಲಾದವುಗಳಲ್ಲಿ ವಿವರಿಸಲ್ಪಟ್ಟಿದೆ.

ಒಬ್ಬನಲ್ಲದೆ ಜಗಕೆ ಇಬ್ಬರುಂಟೆ ಮತ್ತೆ |
ಒಬ್ಬ ಸರ್ವಜ್ಞ ಕರ್ತನೀ ಜಗಕೆಲ್ಲ |
ಒಬ್ಬನೆ ದೈವ ಸರ್ವಜ್ಞ ||

ಎಂಬ ಸರ್ವಜ್ಞನ ವಚನವೂ ಏಕದೇವತ್ವವನ್ನು ಸರಳವಾಗಿ ಹೇಳುತ್ತದೆ. ಅದರಂತೆ ಒಬ್ಬನೇ ದೇವನಾದ ಪರಮಾತ್ಮನು ಶಿಷ್ಟ ರಕ್ಷಣೆ ಮತ್ತು ದುಷ್ಟಶಿಕ್ಷಣಕ್ಕಾಗಿ ಅವತಾರವೆತ್ತಿದ್ದಾನೆ. ಅಂತಹ ಅವತಾರಗಳಿಗೆ ಒಂದು ನಿಮಿತ್ತವೆಂಬಂತೆ ನಡೆದ ಕಥೆ ಹೀಗಿದೆ...
(ಮುಂದುವರಿಯುವುದು)

Writer Details

ವನರಾಗ ಶರ್ಮಾ

© bangalorewaves. All rights reserved. Developed And Managed by Rishi Systems P. Limited