Untitled Document
Sign Up | Login    
ರಾಮಾಯಣ
ನಾರದರ ಆಗಮನ ರಾಮಕಥಾ ನಿರೂಪಣ
ವಾಲ್ಮೀಕಿ ಮಹರ್ಷಿಗಳ ಆಶ್ರಮಕ್ಕೆ ತ್ರಿಲೋಕ ಸಂಚಾರಿಯಾದ ನಾರದರ ಆಗಮನ

ಮುನಿ ವಾಲ್ಮೀಕಿಯ ಆಶ್ರಮಕೊಂದಿನ
ಬಂದರು ಮುನಿವರ ನಾರದರು ||
ದಿವ್ಯದ ರಮ್ಯದ ರಾಜಾರಾಮನ
ಪಾವನಚರಿತೆಯನೊರೆದಿಹರು ||

ಒಂದು ಮುಂಜಾನೆ ವಾಲ್ಮೀಕಿ ಮಹರ್ಷಿಗಳ ಆಶ್ರಮಕ್ಕೆ ತ್ರಿಲೋಕ ಸಂಚಾರಿಯಾದ ನಾರದ ಮುನಿಗಳು ಭಗವಂತನ ನಾಮಸ್ಮರಣೆ ಮಾಡುತ್ತ ತಂಬೂರಿಯನ್ನು ಸುಶ್ರಾವ್ಯವಾಗಿ ಮೀಟುತ್ತ ಬಂದಿಳಿದರು. ವಾಲ್ಮೀಕಿಗಳಿಗೆ ಬಹಳ ಸಂತೋಷವಾಯಿತು. ನಾರದರನ್ನು ಆದರದಿಂದ ಸ್ವಾಗತಿಸಿ, ಆಸನವಿತ್ತು ಅರ್ಘ್ಯ ಪಾದ್ಯಗಳಿಂದ ಉಪಚರಿಸಿ ಪೂಜಿಸಿ ಕುಶಲವನ್ನು ಕೇಳಿದರು. ಅನಂತರ ನಾರದರನ್ನು ಉದ್ದೇಶಿಸಿ ಮಹರ್ಷಿಗಳೆ, ನೀವು ತ್ರಿಲೋಕ ಸಂಚಾರಿಗಳು. ಜಗತ್ತಿನ ಸಕಲ ವೃತ್ತಾಂತಗಳೂ ನಿಮಗೆ ತಿಳಿದಿರುತ್ತವೆ. ಲೋಕದಲ್ಲಿ ಸರ್ವಶ್ರೇಷ್ಠನಾದ. ಮಹಾಮಹಿಮನಾದ ವ್ಯಕ್ತಿಯೊಬ್ಬನ ಪಾವನ ಚರಿತೆಯನ್ನು ಕೇಳಬೇಕೆಂದು ನನಗೆ ಆಸೆಯಾಗಿದೆ. ಆತನು ಎಲ್ಲರಿಗೂ ಪ್ರಿಯನಾದವನೂ , ನಿರಹಂಕಾರಿಯೂ, ಅಸೂಯಾರಹಿತನೂ, ಸಜ್ಜನರನ್ನು ರಕ್ಷಿಸುವವನೂ, ದುಷ್ಟರನ್ನು ಶಿಕ್ಷಿಸುವವನೂ, ನ್ಯಾಯಪರನೂ , ನೀತಿವಂತನೂ ಗುಣಾಢ್ಯನೂ,ಸತ್ಯವಂತನೂ ಧರ್ಮಾತ್ಮನೂ, ಮೇಧಾವಿಯೂ ಸುಂದರನೂ, ಪ್ರಿಯದರ್ಶನನೂ, ಸಂಕಲ್ಪಧುರಂಧರನೂ ಅಲ್ಲದೇ ಮಹಾಪರಾಕ್ರಮಿಯೂ ಧೈರ್ಯಶಾಲಿಯೂ,ಸಕಲಶಾಸ್ತ್ರವಿದ್ಯಾ ಪಾರಂಗತನೂ ಪರಮಜ್ಞಾನಿಯೂ ಆಗಿರಬೇಕು. ಅಂಥವನು ಯಾರಾದರೂ ಇದ್ದಾರೆಯೆ? ಇದ್ದರೆ ದಯವಿಟ್ಟು ಅಂತಹ ಮಹಾಪುರುಷನ ಕತೆಯನ್ನು ಹೇಳಬೇಕು ಎಂದು ಬೇಡಿಕೊಂಡರು.

ಪ್ರಭು ಶ್ರೀರಾಮಚಂದ್ರ

ಇದನ್ನು ಕೇಳಿ ಬ್ರಹ್ಮ ಮಾನಸಪುತ್ರರಾದ ನಾರದರಿಗೆ ಬಹಳ ಸಂತೋಷವಾಯಿತು. ಮಹಾಪುರುಷನೊಬ್ಬನ ಪುಣ್ಯ ಕಥೆಯನ್ನು ಹೇಳುವ ಅವಕಾಶವಾಯಿತೆಂದು ಮನಸ್ಸು ಪುಲಕಿತವಾಯಿತು. ಅವರು ಹೇಳಿದರು: ವಾಲ್ಮೀಕಿಯೆ, ನೀನು ಹೇಳಿದಂತೆ ಚಂದ್ರನ ಷೋಡಶ ಕಲೆಗಳಂತೆ ಹದಿನಾರು ಗುಣಗಳಿಂದ ಕೂಡಿದ ವ್ಯಕ್ತಿUಳು ಲೋಕದಲ್ಲಿ ವಿರಳರೇ ಸರಿ. ಆದರೂ ಅಂತಹ ಗುಣವಂತನಾದ ಮಹಾಪುರುಷನೊಬ್ಬನಿದ್ದಾನೆ ಅವನೇ ಇಕ್ಷ್ವಾಕು ವಂಶದ ಕುಡಿಯಾದ ಶ್ರೀರಾಮಚಂದ್ರ.

ಆತ ಗಾಂಭೀರ್ಯದಲ್ಲಿ ಸಮುದ್ರ ರಾಜನಂತೆಯೂ, ಸ್ಥೈರ್ಯದಲ್ಲಿ ಹಿಮಗಿರಿಯಂತೆಯೂ, ಶೌರ್ಯದಲ್ಲಿ ಮಹಾವಿಷ್ಣುವಿನಂತೆಯೂ, ಹುಣ್ಣಿವೆಯ ಚಂದ್ರನಂತೆ ಆನಂದದಾಯಕನೂ, ಜನರನ್ನು ರಮಿಸುವವನೂ ಆಗಿದ್ದಾನೆ. ಎಲ್ಲ ನದಿಗಳು ಸಾಗರದ ಬಳಿ ಹೋಗಿ ಸೇರುವಂತೆ ಸಜ್ಜನರೆಲ್ಲ ಆತನ ಸನ್ನಿಧಿಯನ್ನೇ ಬಯಸುತ್ತಾರೆ. ಆತನಿಗೆ ಕೋಪ ಬಂದರೆ ಪ್ರಳಯಾಗ್ನಿ ಸದೃಶನೂ, ದುಷ್ಟ ಸಂಹಾರಕನೂ ಆಗಿದ್ದಾನೆ. ದೇವತೆಗಳೇ ಎದುರಾದರೂ ಜಯಿಸಬಲ್ಲ ಪರಾಕ್ರಮಿಯಾದ ಆತ ಸಹನೆಯಲ್ಲಿ ಭೂsಮಿದೇವಿಯಂತೆ , ನಿಷ್ಪಕ್ಷಪಾತ ನ್ಯಾಯನಿರ್ಣಯದಲ್ಲಿ ಧರ್ಮದೇವತೆಯಂತೆ, ಸದ್ಗುಣ ಸಂಪನ್ನನಾಗಿದ್ದು ದಾನಮಾಡುವುದರಲ್ಲಿ ಕೋಟಿಕುಬೇರರನ್ನು ಮೀರಿಸುವ ದಾನಿಯೂ, ದಯಾಳುವೂ ಆಗಿದ್ದು ಪ್ರಜೆಗಳೆಲ್ಲ ಸುಖಸಂತೋಷದಿಂದ ನಲಿಯುತ್ತಿರುವ ಆದರ್ಶ ರಾಮರಾಜ್ಯದ ಸ್ಥಾಪಕನಾಗಿ, ರಾಜಾರಾಮನೆನಿಸಿ ರ್ವಜನವಂದ್ಯನೆನಿಸಿದ್ದಾನೆ.

ತುಂಬ ಆಕರ್ಷಕ ನಿಲುವಿನ ಆಜಾನುಬಾಹುವಾದ ಶ್ರೀರಾಮ ಮಿಂಚುವ ಮೈಬಣ್ಣದಿಂದ ಕೂಡಿ ಸರ್ವಾಂಗ ಸುಂದರನಾಗಿದ್ದಾನೆ. ವಾಗ್ಮಿಯೂ, ಮೃದು-ಮಧುರ ಮಾತುಳ್ಳ ಮಿತಭಾಷಿಯೂ, ಏಕಪತ್ನೀವ್ರತಸ್ಥನೂ, ನುಡಿದಂತೆ ನಡೆಯುವವನೂ, ಸರ್ವಜನ ರಂಜಕನೂ ಆಗಿರುವ ಮರ್ಯಾದಾ ಪುರುಷೋತ್ತಮನಾಗಿದ್ದಾನೆ ಎಂದು ನುಡಿದು, ರಾಮಕಥೆಯನ್ನು ಸಾದ್ಯಂತ ಕೇಳಬೇಕೆಂಬ ಆಸಕ್ತಿಯಿಂದ,ಕುತೂಹಲಿತಾನಾಗಿರುವ ವಾಲ್ಮೀಕಿಯನ್ನು ಕುರಿತು ನಾರದರು ದಶರಥ ಮಹಾರಾಜನ ಆಳ್ವಿಕೆ, ಪುತ್ರಕಾಮೇಷ್ಟಿ ಯಾಗ, ರಾಮಜನ್ಮ, ಯುವರಾಜಪಟ್ಟ ತಯಾರಿ, ಕೈಕೇಯೀ ವರಯಾಚನೆ, ರಾಮವನಗಮನ, ಭರತನಬಂಧುಪ್ರೇಮ, ಪಾದುಕಾಪ್ರದಾನ, ಬಂಗಾರದ ಜಿಂಕೆ, ಸೀತಾಪಹರಣ. ಶಬರಿದರ್ಶನ, ಸುಗ್ರೀವ ಸಖ್ಯ, ಆಂಜನೇಯನಿಂದ ಲಂಕಾದಹನ, ಸೇತುಬಂಧ, ರಾವಣ ಸಂಹಾರ, ವಿಭೀಷಣನಿಗೆ ಲಂಕಾಧಿಪತ್ಯ, ಶ್ರೀರಾಮ ಪಟ್ಟಾಭಿಷೇಕ ಮೊದಲಾದ ಎಲ್ಲ ಕತೆಗಳನ್ನೂ ಸಂಕ್ಷೇಪವಾಗಿ ನಿರೂಪಣೆ ಮಾಡಿದರು. ಶ್ರೀರಾಮನ ರಮಣೀಯವಾದ ಕಥೆಯು ವಾಲ್ಮೀಕಿ ಮಹರ್ಷಿಗಳ ಮನಸ್ಸಿನಲ್ಲಿ ಅಮೃತದಂತೆ ತುಂಬಿಕೊಂಡಿತು. ಅವರು ನಾರದರನ್ನು ಭಕ್ತಿಭಾವದಿಂದ ಮತ್ತೊಮ್ಮೆ ಪೂಜಿಸಿ, ಹಣ್ಣುಹಂಪಲು ನೀಡಿ ಬೀಳ್ಕೊಂಡರು. ನಾರದರು ಆಕಾಶ ಮಾರ್ಗವಾಗಿ ದೇವಲೋಕಕ್ಕೆ ತೆರಳಿದರು.

(ಮುಂದುವರಿಯುವುದು)

Writer Details

ವನರಾಗ ಶರ್ಮಾ

© bangalorewaves. All rights reserved. Developed And Managed by Rishi Systems P. Limited